ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ರೈಟ್ ಟು ಎಜ್ಯುಕೇಷನ್ (ಆರ್‌ಟಿಇ) ಅಡಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರವೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸೋಮವಾರ ಹೈಕೋರ್ಟ್ ತೆರವುಗೊಳಿಸಿದೆ.
ಮೂಲ ಅರ್ಜಿಯ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೈಕೋರ್ಟ್ ಏಕಸದಸ್ಯ ಪೀಠ ಇಂದು ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
1ರಿಂದ 8ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಬೇಕೆಂದು ಸರ್ಕಾರ ಕಾನೂನು ರೂಪಿಸಿದೆ. ಅಲ್ಲದೇ ಖಾಸಗಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿಗೂ ಆರ್ ಟಿಇ ಅಡಿ ಪ್ರವೇಶ ನೀಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಸರ್ಕಾರದ ಸೂಚನೆ ವಿರುದ್ಧ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, 2015-16ನೇ ಸಾಲಿನಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಪ್ರವೇಶಕ್ಕೆ ಕಳೆದ ತಿಂಗಳು ತಡೆ ನೀಡಿತ್ತು.
ಬಡ ಹಾಗೂ ಮಧ್ಯಮ ವರ್ಗದ ಪೋಷಕರ ಪಾಲಿಗೆ ತಮ್ಮ ಮಕ್ಕಳಿಗೆ ಅತ್ಯುನ್ನತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ನೀಡುವುದಕ್ಕೆ ಇರುವ ಪವರ್ಫುಲ್ ಕಾಯ್ದೆ ಈ ಆರ್ ಟಿಇ.