ಪ್ರಧಾನ ಸುದ್ದಿ

ಪಠಾಣ್‌ಕೋಟ್ ಉಗ್ರ ದಾಳಿ; ಭಾರತ ಕಳುಹಿಸಿದ ಹೊಸ ಸಾಕ್ಷ್ಯ ಕೈ ಸೇರಿದೆ: ಪಾಕ್ ಪ್ರಧಾನಿ

Rashmi Kasaragodu
ಲಂಡನ್: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಭಾರತ ಪಾಕಿಸ್ತಾನಕ್ಕೆ ಹೊಸ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಪಠಾಣ್ ಕೋಟ್ ಉಗ್ರ ದಾಳಿಗೆ ಸಂಬಂಧಿಸಿದ ಹೊಸ ಸಾಕ್ಷ್ಯಗಳು ಭಾನುವಾರ ನಮ್ಮ ಕೈ ಸೇರಿದೆ. ಭಾರತ ಕೊಟ್ಟ ಸಾಕ್ಷ್ಯಗಳನ್ನು ಅಡಗಿಸಿಡಬಹುದಿತ್ತು, ಇಲ್ಲವೇ ಮರೆತು ಹೋಯಿತು ಎಂದು ಹೇಳಬಹುದಿತ್ತು. ಆದರೆ ಭಾರತ ನೀಡಿದ ಸಾಕ್ಷ್ಯಗಳು ನಮ್ಮ ಕೈ ಸೇರಿವೆ ಎಂದು ಶರೀಫ್ ಭಾನುವಾರ ಹೇಳಿದ್ದಾರೆ.
ಪಠಾಣ್‌ಕೋಟ್ ಉಗ್ರ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಹಲವಾರು ವರುಷಗಳಿಂದ ಭಾರತ ಅನುಭವಿಸುತ್ತಿರುವ ಉಗ್ರರಿಂದಾಗುವ ಯಾತನೆಗೆ ಇದೊಂದು ಹೊಸ ಉದಾಹರಣೆ. ಅಷ್ಟೇ ಅಲ್ಲದೆ, ಪಾಕಿಸ್ತಾನ ಉಗ್ರ ಸಂಘಟನೆಗಳನ್ನು ಮಟ್ಟಹಾಕಲು ಕಾರ್ಯಪ್ರವರ್ತವಾಗಿದೆ ಎಂದು ತೋರಿಸಿಕೊಡಬೇಕೆಂದು ಎಂದು ಹೇಳಿದ್ದರು. 
ಒಬಾಮಾರ ಪ್ರತಿಕ್ರಿಯೆಯ ಬೆನ್ನಲ್ಲೇ ಶರೀಫ್ ಈ ಹೊಸ ಸಾಕ್ಷ್ಯಗಳು ಕೈ ಸೇರಿರುವ ಬಗ್ಗೆ ಮಾತನಾಡಿದ್ದಾರೆ. ಆ ಸಾಕ್ಷ್ಯಗಳನ್ನು ನಾವು ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ಈ ತನಿಖೆ ಪೂರ್ಣವಾದ ಕೂಡಲೇ ನಾವು ಅದನ್ನು ನಿಮ್ಮ ಮುಂದೆ ತರುತ್ತೇವೆ. ಅದೇ ವೇಳೆ ಪಾಕ್‌ನಿಂದ ನಾವು ವಿಶೇಷ ತನಿಖಾ ದಳವನ್ನು ಭಾರತಕ್ಕೆ ಕಳುಹಿಸಿ ಅಲ್ಲಿಂದ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಹೇಳಿದ್ದೇವೆ .
ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಾಯಗಳನ್ನು ಮಾಡುತ್ತೇವೆ ಎಂದು ನಾನು ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತು ನೀಡಿದ್ದೀನಿ. ನಾವು ಸರಿಯಾದ ದಿಶೆಯಲ್ಲೇ ಸಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯ ಒದಗಿಸುತ್ತೇವೆ ಎಂದು ಶರೀಫ್ ಭರವಸೆ ನೀಡಿದ್ದಾರೆ.
SCROLL FOR NEXT