ಪ್ರಧಾನ ಸುದ್ದಿ

ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್ ನಿರಪರಾಧಿ ಎಂದು ಸಿಎಂ ತೀರ್ಪು!

Lingaraj Badiger
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಅತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ನಿರಪರಾಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಶುಕ್ರವಾರ ತೀರ್ಪು ನೀಡಿದ್ದಾರೆ!
ಹೌದು. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಜಾರ್ಜ್ ಅವರನ್ನು ಸಮರ್ಥಿಸಿಕೊಂಡ ಪರಿ ಇದು. 99 ಅಪರಾಧಿಗಳು ತಪ್ಪಿಸಿಕೊಂಡ್ರೂ ಪರವಾಗಿಲ್ಲ... ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಹೇಳುವ ಮೂಲಕ ಜಾರ್ಜ್ ನಿರಪರಾಧಿ ಎಂದು ಸಾಬೀತುಪಡಿಸಲು ಹೊರಟಿದ್ದಾರೆ.
ಇಂದು ನಾಗವಾರದ ಹೆಣ್ಣೂರು ಕೆರೆ ಜೀವವೈವಿಧ್ಯವನದ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಜಾರ್ಜ್ ಅವರನ್ನು ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಅವರ ಆತ್ಮಹತ್ಯೆಗೂ ಜಾರ್ಜ್ ಅವರಿಗೂ ಸಂಬಂಧವಿಲ್ಲ ಎಂದು ಮತ್ತೊಮ್ಮೆ ಆರೋಪಿ ಪರ ವಕಾಲತ್ತು ವಹಿಸಿ ಮಾತನಾಡಿದ್ದಾರೆ. 
ವಿರೋಧ ಪಕ್ಷದವರು ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ಅವರ ರಾಜಕೀಯ ಪ್ರಭಾವಕ್ಕಾಗಿ ಜಾರ್ಜ್ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದ ಸಿಎಂ ಜಾರ್ಜ್ ರಾಜಿನಾಮೆ ನೀಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ 6 ಕೋಟಿ ಜನತೆ ರಾಜಿನಾಮೆ ಕೇಳುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಹೇಳಿಕೆಯೇ ಹೊರತು, ರಾಜ್ಯದ ಜನತೆಯದ್ದಲ್ಲ. 99 ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಕಾನೂನಿನ ಆಶಯ. ಅದರಂತೆ ನಾನು ನಿರಪರಾಧಿಯಾದ ಜಾರ್ಜ್ ಅವರ ರಾಜೀನಾಮೆ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರ ಯಾರ ರಕ್ಷಣೆಗೂ ನಿಂತಿಲ್ಲ, ಆದರೆ ನಿರಪರಾಧಿಗೆ ಶಿಕ್ಷೆ ಕೊಡುವ ನಿರ್ಧಾರಕ್ಕೆ ಮಾತ್ರ ಕೈಹಾಕುವುದಿಲ್ಲ. ಈಗಾಗಲೇ ವಿರೋಧ ಪಕ್ಷದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಕೆಜೆ ಜಾರ್ಜ್, ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದರು. ಬಳಿಕ ಮಾತನಾಡಿದ ಸಿಎಂ, ಜಾರ್ಜ್ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು.
SCROLL FOR NEXT