ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ
ನವದೆಹಲಿ: ಸಂಸತ್ ವ್ಯವಹಾರಗಳ ಸಂಪುಟ ಸಮಿತಿಯನ್ನು (ಸಿಸಿಪಿಎ) ಪುನರ್ರಚಿಸಿದ್ದು ಸಚಿವೆ ಸ್ಮೃತಿ ಇರಾನಿ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಮಾನವ ಸಂಪನ್ಮೂಲ ಸಚಿವಾಲಯದ ಅವರ ಉತ್ತರಾಧಿಕಾರಿ ಪ್ರಕಾಶ್ ಜಾವಡೇಕರ್ ಅವರಿಗೆ ಸ್ಥಾನ ನೀಡಲಾಗಿದೆ. ಸ್ಮೃತಿ ಇರಾನಿ ಅವರನ್ನು ಸಮಿತಿಯ ವಿಶೇಷ ಆಹ್ವಾನಿತರಾಗಿ ಹಿಂಬಡ್ತಿ ನೀಡಲಾಗಿದೆ. ಈ ವಾರದ ಪ್ರಾರಂಭದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯಾಗಿ ರಾಜೀನಾಮೆ ನೀಡಿದ್ದ ನಜ್ಮಾ ಹೆಫ್ತುಲ್ಲಾ ಕೂಡ ಸಮಿತಿಯಿಂದ ಕೈಬಿಡಲಾಗಿದೆ.
ಇತ್ತೀಚೆಗೆ ನಡೆದ ಸಂಪುಟ ಪುನರ್ರಚನೆಯಲ್ಲಿ ಸ್ಮೃತಿ ಇರಾನಿ ಅವರಿಗೆ ಎಚ್ ಆರ್ ಡಿ ಬದಲಿಗೆ ಜವಳಿ ಖಾತೆ ನೀಡಲಾಗಿತ್ತು.
ಇದಕ್ಕೂ ಮೊದಲು ಈ ಸಮಿತಿಗೆ ಪ್ರಕಾಶ್ ಜಾವಡೇಕರ್ ವಿಶೇಷ ಆಹ್ವಾನಿತರಾಗಿದ್ದರು. ನೂತನ ಕಾನೂನು ಮಂತ್ರಿ ರವಿಶಂಕರ್ ಪ್ರಸಾದ್ ಈ ಸಮಿತಿಯಲ್ಲಿ ಡಿ ವಿ ಸದಾನಂದ ಗೌಡ ಅವರನ್ನು ಬದಲಿಸಿದ್ದಾರೆ.
ಹಾಗೆಯೇ ರಾಜೀವ್ ಪ್ರತಾಪ್ ರೂಡಿ ಅವರನ್ನು ಎಸ್ ಎಸ್ ಅಹ್ಲುವಾಲಿಯಾ ಬದಲಿಸಿದ್ದಾರೆ. ನೂತನವಾಗಿ ಸಚಿವರಾಗಿರುವ ಪಿ ಪಿ ಚೌಧರಿ ವಿಶೇಷ ಆಹ್ವಾನಿತರಾಗಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್ ಸಿಸಿಪಿಎ ಮುಂದಾಳತ್ವ ವಹಿಸಿದ್ದು ಮೂವರು ವಿಶೇಷ ಆಹ್ವಾನಿತರು ಸೇರಿದಂತೆ ಈ ಸಮಿತಿಯಲ್ಲಿ 11 ಜನ ಸದಸ್ಯರಿದ್ದಾರೆ. ಸಂಸತ್ ಸದನಗಳ ದಿನಾಂಕ ಗೊತ್ತುಪಡಿಸಲು ಶಿಫಾರಸ್ಸು ಮಾಡುವುದು ಈ ಸಮಿತಿಯೇ.
ಸುಶ್ಮಾ ಸ್ವರಾಜ್, ಅರುಣ್ ಜೇಟ್ಲಿ, ಎಂ ವೆಂಕಯ್ಯ ನಾಯ್ಡು, ರಾಮ್ ವಿಲಾಸ್ ಪಾಸ್ವಾನ್ ಮತ್ತು ಅನಂತ ಕುಮಾರ್ ಈ ಸಮಿತಿಯ ಇತರ ಸದಸ್ಯರು ಹಾಗೂ ಮುಕ್ತಾರ್ ಅಬ್ಬಾಸ್ ನಕ್ವಿ ಮತ್ತೊಬ್ಬ ವಿಶೇಷ ಆಹ್ವಾನಿತ.