ಪ್ರಧಾನ ಸುದ್ದಿ

ಕಾಶ್ಮೀರದಲ್ಲಿ ದಿನಪತ್ರಿಕೆಗಳು ವಶ; ಪತ್ರಿಕಾ ಮುದ್ರಣ ಕಚೇರಿಗಳ ಮೇಲೆ ಪೊಲೀಸ್ ದಾಳಿ

Guruprasad Narayana
ಶ್ರೀನಗರ: ಈಗಾಗಲೇ ಮೊಬೈಲ್ ಮತ್ತು ಇಂಟರ್ನೆಟ್ ಸೇವಗಳನ್ನು ಕಾಶ್ಮೀರ ಕಣಿವೆಯಲ್ಲಿ ರದ್ದುಗೊಳಿಸಲಾಗಿದ್ದು, ಮಾಹಿತಿ ಸಂಪರ್ಕವನ್ನು ಕಡಿತಗೊಳಿಸುವ ಮುಂದಿವರಿದ ಕ್ರಮವಾಗಿ ಪೊಲೀಸರು ಪತ್ರಿಕಾ ಮುದ್ರಣ ಕಚೇರಿಗಳ ಮೇಲೆ ಮಧ್ಯರಾತ್ರಿ ದಾಳಿ ಮಾಡಿ ಉರ್ದು ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮುದ್ರಿತ ದಿನಪತ್ರಿಕೆಗಳನ್ನು ವಶಪಡಿಸಿಕೊಂಡಿರುವುದಾಗಿ ಈ ಪ್ರಕಾಶಕರ ಅಂತರ್ಜಾಲ ತಾಣದಲ್ಲಿ ಆರೋಪಿಸಲಾಗಿದ್ದು, ಮುದ್ರಣ ಕಚೇರಿಗಳ ಸಿಬ್ಬಂದಿಗಳನ್ನು ಬಂಧಿಸಲಾಗಿದೆ ಎಂದು ದೂರಿದ್ದಾರೆ. 
"'ಗ್ರೇಟರ್ ಕಾಶ್ಮೀರ್' ಪತ್ರಿಕೆಯ ಮುದ್ರಣ ಪ್ಲೇಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗು 'ಕಾಶ್ಮೀರ್ ಉಜ್ಮಾ'ದ (ಉರ್ದು ದಿನಪತ್ರಿಕೆ) 50 ಸಾವಿರ ಮುದ್ರಿತ ಪ್ರತಿಗಳನ್ನು ವಶಪಡಿಸಿಕೊಂಡು ಮುದ್ರಣ ಕಚೇರಿಗಳನ್ನು ಮುಚ್ಚಿಸಿದ್ದಾರೆ" ಎಂದು ಗ್ರೇಟರ್ ಕಾಶ್ಮೀರ್ ಅಂತರ್ಜಾಲ ತಾಣ ವರದಿ ಮಾಡಿದೆ. 
ಮತ್ತೊಂದು ಇಂಗ್ಲಿಷ್ ದಿನಪತ್ರಿಕೆ 'ಕಾಶ್ಮೀರ್ ರೀಡರ್' ಆರೋಪಿಸಿರುವಂತೆ "'ಕಾಶ್ಮೀರ್ ರೀಡರ್' ಪತ್ರಿಕೆಯ ಪ್ರತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ" ಎಂದಿದೆ. 
"ಮಧ್ಯರಾತ್ರಿ ಎರಡು ಘಂಟೆಗೆ ರಂಗ್ರೇತ್ ನ ಕೆಟಿ ಮುದ್ರಣ ಕಚೇರಿ ಮೇಲೆ ದಾಳಿ ಮಾಡಿ ಎಂಟು ಜನರನ್ನು ವಶಕ್ಕೆ ತೆಗೆದುಕೊಂಡು 'ಕಾಶ್ಮೀರ್ ರೀಡರ್' ಪತ್ರಿಕೆಯ ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಕಾಶ್ಮೀರ್ ರೀಡರ್.ಕಾಮ್ ಆರೋಪಿಸಿದೆ. 
ಕಾಶ್ಮೀರ್ ರೀಡರ್, ತಮೀಲ್ ಈ ಇರ್ಷಾದ್, ಕಾಶ್ಮೀರ್ ಟೈಮ್ಸ್, ಕಾಶ್ಮೀರ್ ಒಬ್ಸರ್ವರ್, ದ ಕಾಶ್ಮೀರ್ ಮಾನಿಟರ್, ಬ್ರೈಟರ್ ಕಾಶ್ಮೀರ್, ಕಾಶ್ಮೀರ್ ಏಜ್ ಪತ್ರಿಕೆಗಳನ್ನು ಮುಂತಾದ ಪತ್ರಿಕೆಗಳು ಮುದ್ರಣವಾಗುವುದು ಕೆಟಿ ಮುದ್ರಣ ಕಚೇರಿಯಲ್ಲಿಯೇ. 
"ದಿನಪತ್ರಿಕೆ ವಿತರಿಸಲು ಮುದ್ರಣ ಕಚೇರಿಗೆ ತೆರಳುವ ಹೊತ್ತಿಗೆ ಪೊಲೀಸರು ಪತ್ರಿಕೆಗಳ ಪ್ರತಿಗಳನ್ನು ವಶಪಡಿಸಿಕೊಂಡಿದ್ದರು. ಏಕೆ ಈ ರೀತಿ ಮಾಡಲಾಗುತ್ತಿದೆ ಎಂದು ಕೇಳಿದ್ದಕ್ಕೆ ನಮ್ಮ ಜೊತೆಗೂ ಕೆಟ್ಟ ರೀತಿಯಲ್ಲಿ ವರ್ತಿಸಿದರು" ಎಂದು ರಸ್ತೆ ಬದಿಯ ದಿನಪತ್ರಿಕೆ ಮಾರಾಟಗಾರರೊಬ್ಬರು ಹೇಳಿದ್ದಾರೆ. 
ಹಿಜಬುಲ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದ ನಂತರ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಹತ್ತಿಕ್ಕಲು ಮೊಬೈಲ್ ಸಂಪರ್ಕವನ್ನು ಸರ್ಕಾರ ಮಂಗಳವಾರದಿಂದಲೇ ಕಡಿತಗೊಳಿಸಿದ್ದು ಇಂಟರ್ನೆಟ್ ಸೇವೆಗಳನ್ನು ರದ್ದುಗೊಳಿಸಿದೆ. ಕಣಿವೆಯಲ್ಲಿ ಗಲಭೆ ಶನಿವಾರಕ್ಕೆ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತ್ಯೇಕವಾದಿಗಳು ಸೋಮವಾರ ಬಂಧ್ ಆಚರಣೆಗೆ ಕರೆ ನೀಡಿದ್ದಾರೆ. 
ಕಣಿವೆಯಲ್ಲಿ ಸದ್ಯಕ್ಕೆ ಬಿ ಎಸ್ ಎನ್ ಎಲ್ ಸೇವೆ ಮಾತ್ರ ಲಭ್ಯವಿದೆ. 
SCROLL FOR NEXT