ನವದೆಹಲಿ: ಹಲವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲದ ದೊರೆ ವಿಜಯ್ ಮಲ್ಯ ಅವರ ವಿರುದ್ಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.
ದೆಹಲಿ ಏರ್ ಪೋರ್ಟ್ ಆಪರೇಟರ್(ಡಿಐಎಲ್) ವಿಜಯ್ ಮಲ್ಯ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ವಿಚಾರಣಾ ನ್ಯಾಯಾಲಯ ಆರೋಪಿ ವಿಜಯ್ ಮಲ್ಯ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು,
ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ಮಲ್ಯ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಿ.ಎಸ್.ತೇಜಿ ಅವರು, ವಿಚಾರಣಾ ನ್ಯಾಯಾಲಯದ ಆದೇಶ ಸಮರ್ಥಿನೀಯವಲ್ಲ ಮತ್ತು ಕಾನೂನು ಬಾಹಿರ ಎಂದು ಹೇಳಲು ಸಾಧ್ಯವಿಲ್ಲ ಎಂದಿದೆ.
ನನ್ನ ಕಕ್ಷಿದಾರರು ಕಿಂಗ್ ಫಿಶರ್ ಏರ್ ಲೈನ್ಸ್ ನ ದಿನ ನಿತ್ಯದ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಕಂಪನಿಯ ಚೆಕ್ ಬೌನ್ಸ್ ಪ್ರಕರಣಗಳಿಗೆ ಅವರು ಜವಾಬ್ದಾರರಲ್ಲ ಎಂದು ವಿಜಯ್ ಮಲ್ಯ ಪರ ವಕೀಲರು ವಾದಿಸಿದರು. ಆದರೆ ಇದಕ್ಕೆ ಒಪ್ಪದ ಕೋರ್ಟ್, ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅವರೇ ಜವಾಬ್ದಾರರು ಎಂದು ಹೇಳಿದೆ.