ಪ್ರಧಾನ ಸುದ್ದಿ

ಬಿಹಾರ ಪತ್ರಕರ್ತನ ಕೊಲೆ ಪ್ರಕರಣ: ಪೊಲೀಸರಿಗೆ ಶರಣಾದ ಮುಖ್ಯ ಆರೋಪಿ

Guruprasad Narayana

ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯ ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಸಂಚುಕೋರ ಮತ್ತು ಪ್ರಮುಖ ಆರೋಪಿ ಲದ್ದನ್ ಮಿಯನ್ ಗುರುವಾರ ಪೊಲೀಸರಿಗೆ ಶರಣಾಗಿದ್ದಾನೆ.

ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮಾಜಿ ಸಂಸದ ಮೊಹಮದ್ ಶಹಾಬುದ್ದೀನ್ ಅವರ ಆಪ್ತ ಲದ್ದನ್ ಮಿಯನ್ ಎಂದು ತಿಳಿಯಲಾಗಿದೆ.

ಲದ್ದನ್ ಶರಣಾದ ನಂತರ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಆದರೆ ರಾಜದೇವ್ ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದ ಲದ್ದನ್ ಹೇಳಿದ್ದಾರೆ "ರಾಜದೇವ್ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಪೊಲೀಸರು ತಪ್ಪಾಗಿ ನನ್ನನು ಸಿಕ್ಕಿಸಿದ್ದಾರೆ" ಎಂದು ಜೈಲಿಗೆ ತೆರಳುವ ಮುಂಚೆ ಮಾಧ್ಯಮಗಳಿಗೆ ಅವರು ಹೇಳಿದ್ದಾರೆ.

ಕಳೆದ ತಿಂಗಳು ಪತ್ರಕರ್ತನನ್ನು ಶೂಟ್ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ ಮೇಲೆ ಇವರಿಗೆ ಕೊಲೆ ಮಾಡಲು ಡೀಲ್ ಮಾಡಿದ್ದು ಲದ್ದನ್ ಎಂದು ಪೊಲೀಸರು ತಿಳಿಸಿದ್ದರು ಮಾತು ಅವನಿಗಾಗಿ ಹುಡುಕಾಟ ನಡೆಸಿದ್ದರು.

ಹಿಂದೂಸ್ತಾನ್ ಟೈಮ್ಸ್ ನ ಭಾಗವಾದ ಹಿಂದಿ ದಿನಪತ್ರಿಕೆ ಹಿಂದೂಸ್ತಾನ್ ನ ಸಿವಾನ್ ಬ್ಯೂರೋ ಮುಖ್ಯಸ್ಥನಾಗಿದ್ದ ರಾಜದೇವ್ ರಂಜನ್ ಅವರನ್ನು ಮೇ ೧೪ ರಂದು ಸ್ಟೇಶನ್ ರಸ್ತೆಯ ಜನನಿಬಿಡ ಮಾರುಕಟ್ಟೆಯ ಬಳಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದು ಪೂರ್ವ ನಿಯೋಜಿತ ಪಿತೂರಿ ಎಂದು ಪೊಲೀಸರು ತಿಳಿಸಿದ್ದರು.

ಪತ್ರಕರ್ತನ ಕೊಲೆಯ ವಿಚಾರಣೆಗೆ ನಡೆಸುವಂತೆ ಸಿಬಿಐ ಗೆ ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿದ್ದಾರೆ. 

SCROLL FOR NEXT