ನವದೆಹಲಿ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಕಾಂಗ್ರೆಸ್ ನಾಯಕರು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈಧಿ ಅವರನ್ನು ಭೇಟಿ ಮಾಡಿದ್ದು, ನಿಗದಿಯಂತೆ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ಜಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ದೆಹಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿತು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ನಾವು ಯಾರಿಗೂ ಹಣ ಕೊಟ್ಟು ಮನವೊಲಿಸಬೇಕಾದ ಅಗತ್ಯ ಇಲ್ಲ ಮತ್ತು ಈ ರೀತಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಗೆ ಯಾವುದೇ ನಂಬಿಕೆಯೂ ಇಲ್ಲ ಎಂದರು.
ನಮ್ಮ ಬಳಿ ಈಗಾಗಲೇ 31 ಮತಗಳಿವೆ. ಅಲ್ಲದೆ ಪಕ್ಷೇತರರು ಕೂಡ ನಮಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಪರಮೇಶ್ವರ ತಿಳಿಸಿದರು.
ಇನ್ನು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯರಾಗಲಿ, ನಾನಾಗಲಿ ಯಾರಿಗೂ ಹಣದ ಆಮಿಷ ಒಡ್ಡಿಲ್ಲ. ಹೀಗಾಗಿ ರಾಜ್ಯಸಭೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದಿಂದ ವರದಿ ನಿರೀಕ್ಷಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗ, ವರದಿ ಬಂದ ನಂತರ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಶಾಸಕರಿಗೆ ಸಂಸದರ ನಿಧಿಯನ್ನು ಅನುದಾನ ನೀಡುತ್ತೇವೆ ಎಂದು ಹೇಳಿದ್ದೇವೆ. ಆದರೆ 100 ಕೋಟಿ ರುಪಾಯಿ ಕೊಡುತ್ತೇವೆ ಎಂದು ನಾವು ಹೇಳಿಲ್ಲ. ಈ ಬಗ್ಗೆ ಜೆಡಿಎಸ್ ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಗೃಹ ಸಚಿವರು ಆರೋಪಿಸಿದರು.
ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರಾಜ್ಯದ ಆರು ಮಂದಿ ಶಾಸಕರು ಹಾಗೂ ಇಬ್ಬರು ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳು ನೋಟಿಗಾಗಿ ವೋಟು ಡೀಲ್ ಕುದುರಿಸಿರುವುದು ಬಹಿರಂಗಗೊಂಡಿದೆ. ಈ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯುಕ್ತ ಅನಿಲ್ ಕುಮಾರ್ ಜಾ ಅವರಿಗೆ ಸೂಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos