ಚಂಡೀಘಡ: 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಚಾಲನೆ ಚಂಡೀಘಡದಲ್ಲಿ ನೀಡಿದರು.
ಚಂಡೀಘಡದ ಕ್ಯಾಪಿಟಲ್ ಕಾಂಪ್ಲೆಕ್ಸ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ ಮಾಡುವ ಮೂಲಕ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಯೋಗಕ್ಕೆ ಬಡವ ಶ್ರೀಮಂತರೆಂಬ ಯಾವುದೇ ಭೇದ-ಭಾವವಿಲ್ಲ. ಯೋಗವನ್ನು ಸಾಮಾನ್ಯರಲ್ಲಿ ಸಾಮಾನ್ಯರೂ ಕೂಡ ಮಾಡಬಹುದಾಗಿದ್ದು, ಇದು ಪರಲೋಕದ ವಿಜ್ಞಾನವಲ್ಲ ಇಹಲೋಕದ ಜ್ಞಾನ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಯೋಗ ಸಾಧಕರಿಗೆ ಮುಂದಿನ ಸಾಲಿನಿಂದ ಪ್ರಶಸ್ತಿ
ಇದೇ ವೇಳೆ "ಯೋಗ ದಿನದ ಮುಂದಾಳತ್ವವನ್ನು ಭಾರತವಹಿಸಿರುವುದು ನನಗೆ ಹೆಮ್ಮೆಯ ಸಂಗತಿ ಎಂದ ಪ್ರಧಾನಿ ನರೇಂದ್ರ ಮೋದಿ, ಈ ವಿಶಿಷ್ಟ ಕಾರ್ಯಕ್ರಮದಿಂದ ಇಡೀ ದೇಶದ ಜನತೆ ಒಂದಾಗಿದ್ದೇವೆ. ಯೋಗ ದಿನಕ್ಕೆ ಬೇರಾವ ದಿನವೂ ಸರಿಸಾಟಿಯಲ್ಲ. ಸಕಲ ರೋಗಕ್ಕೂ ದಿವೌಷಧವಾದ ಯೋಗವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯ ಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲಾ ಒಬ್ಬರು ಯೋಗಸಾಧಕರಿಗೆ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳುತ್ತೇನೆ. ಇದಕ್ಕಾಗಿ ನುರಿತ ಯೋಗ ತಜ್ಞರನ್ನು ನೇಮಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.
ಯೋಗದಿಂದ ಮಧುಮೇಹ ಗುಣಮುಖ ಸಾಧ್ಯ
ಇನ್ನು ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ ಎಂದು ಹೇಳಿದ ಪ್ರಧಾನಿ ಮೋದಿ, ಮದುಮೇಹಿಗಳು ಯೋಗದ ಮೊರೆ ಹೋದರೆ ಖಂಡಿತಾ ಮಧುಮೇಹ ಗುಣಮುಖವಾಗಲಿದೆ ಎಂದು ಮೋದಿ ಹೇಳಿದರು.
ವಿವಿಧ ಆಸನಗಳ ಮಾಡಿದ ಪ್ರಧಾನಿ ಮೋದಿ
ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಜನರಲ್ಲಿ ತಾವೂ ಒಬ್ಬರಾಗಿ ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡಿದರು. ಈ ವೇಳೆ ಶಶಾಂಕಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ವಕ್ರಾಸನ, ಮರೀಚ್ಯಾಸನ ಸೇರಿದಂತೆ ವಿವಿಧ ಆಸಗಳನ್ನು ಮಾಡುವ ಮೂಲಕ ಪ್ರಧಾನಿ ಇತರರಿಗೆ ಮಾದರಿಯಾದರು.