ನವದೆಹಲಿ: ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದು ನನ್ನ ಹಕ್ಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಾಲಿವುಡ್‌ನ ಹಿರಿಯ ಗೀತ ರಚನೆಕಾರ ಜಾವೇದ್ ಅಕ್ತರ್ ಅವರು ಮಂಗಳವಾರ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
ವರ್ಷಾಂತ್ಯಕ್ಕೆ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಜಾವೇದ್ ಅಕ್ತರ್ ಅವರು, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಾಮಾನ್ಯವಾಗಿ ವಿದಾಯ ಭಾಷಣ ಎಲ್ಲರಿಗೂ ಗೌರವ ವಂದನೆ, ಅಭಿನಂದನೆ ಸಲ್ಲಿಸುವುದು ಸಂಪ್ರದಾಯ...ಆದರೆ ಅಕ್ತರ್ ಅವರು ಮೇಲ್ಮನೆಯ ಸಂಪ್ರದಾಯ ಮುರಿದು ಓವೈಸಿ ಹೇಳಿಕೆಯನ್ನು ಖಂಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಅಕ್ತರ್ ಅವರು ನೇರವಾಗಿ ಓವೈಸಿಯ ಹೆಸರು ಪ್ರಸ್ತಾಪಿಸದೆ, 'ಒಬ್ಬ ವ್ಯಕ್ತಿ ಇದ್ದಾರೆ. ಅವರು ತಮ್ಮನ್ನು ತಾವು ರಾಷ್ಟ್ರೀಯ ನಾಯಕ ಎಂದು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ಆ ವ್ಯಕ್ತಿ ರಾಷ್ಟ್ರೀಯ ನಾಯಕ ಅಲ್ಲ. ಆತ ಕೇವಲ ಹೈದರಾಬಾದ್ ನಗರದ ಒಂದು ಪ್ರದೇಶದ ನಾಯಕ ಅಷ್ಟೆ' ಎಂದರು.
ಹೈದರಾಬಾದ್ ನ ಮೊಹಲ್ಲಾ ನಾಯಕರಿಗೆ ಒಂದು ಪ್ರಶ್ನೆ... ಒಂದು ವೇಳೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬೇಕು ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂಬ ವಾದ ಮಂಡಿಸುವುದಾದರೆ, ಅದು ಶೇರ್ವಾನಿಗೂ ಅನ್ವಯಿಸುತ್ತದೆ. ಶೇರ್ವಾನಿ ಧರಿಸಬೇಕೆಂದು ಸಂವಿಧಾನದಲ್ಲಿ ತಾಕೀತು ಮಾಡಿದೆಯೇ ಎಂದು ಓವೈಸಿಗೆ ತಿರುಗೇಟು ನೀಡಿದರು.