ಪ್ರಧಾನ ಸುದ್ದಿ

ಮುಂದಿನ ಚುನಾವಣೆಯಲ್ಲಿ ಮೀಸಲಾತಿ ಸೌಲಭ್ಯ ಪಡೆಯುವುದಿಲ್ಲ: ಮಾಂಝಿ

Guruprasad Narayana

ಪಾಟ್ನಾ: ಮುಂದಿನ ಚುನಾವಣೆಗಳಲ್ಲಿ ತಾವಾಗಲೀ ತಮ್ಮ ಮನೆಯ ಸದಸ್ಯರಾಗಲಿ ಮೀಸಲಾತಿ ಸೌಲಭ್ಯವನ್ನು ಬಳಸಿಕೊಳ್ಳುವುದಿಲ್ಲ ಎಂದು ಸೋಮವಾರ ಮಾಜಿ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.

"ನಮಗಿಂತಲೂ ದುರ್ಬಲರಾದವರು, ಮತ್ತು ಹೆಚ್ಚು ಅವಶ್ಯಕತೆ ಉಳ್ಳವರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಅನುವಾಗಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ" ಎಂದು ಮಹಾದಲಿತ ಸಮುದಾಯಕ್ಕೆ ಸೇರಿದ ಹಿಂದೂಸ್ತಾನಿ ಅವಾಂ ಮೋರ್ಚಾ(ಎಚ್ ಎ ಎಂ) ಅಧ್ಯಕ್ಷ ಮಾಂಝಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೀಸಲು ಕ್ಷೇತ್ರಗಳಲ್ಲದ ಬಿಹಾರದ ಸಾಮಾನ್ಯ ಕ್ಷೇತ್ರಗಳಿಂದ ತಾವು ಮತ್ತು ತಮ್ಮ ಕುಟುಂಬ ಸದಸ್ಯರು ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಿ ಮಾಂಝಿ ಹೇಳಿದ್ದಾರೆ.

ಸರ್ಕಾರಿ ಕೆಲಸಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಿರಿವಂತರು ಮೀಸಲಾತಿಯನ್ನು ತೊರೆಯಬೇಕು ಎಂದು ಆರ್ ಎಸ್ ಎಸ್ ಮುಖಂಡರು ಆಗ್ರಹಿಸಿದ್ದ ಹಿನ್ನಲೆಯಲ್ಲಿ ಮಾಂಝಿ ಈ ಹೇಳಿಕೆ ನೀಡಿದ್ದಾರೆ.

ಮಾಂಝಿ ಅವರ ಎಚ್ ಎ ಎಂ ಪಕ್ಷ ಬಿಹಾರದಲ್ಲಿ ಬಿಜೆಪಿ ಮತ್ತು ಎನ್ ಡಿ ಎದ ಮೈತ್ರಿ ಪಕ್ಷವಾಗಿದೆ. ಆದರೆ ಕಳೆದ ವಾರ ಎಚ್ ಎ ಎಂ ನ ಕೆಲವು ಮುಖಂಡರು ಆರ್ ಎಸ್ ಎಸ್ ನ ಮೀಸಲಾತಿ ಹೇಳಿಕೆಯನ್ನು ಖಂಡಿಸಿದ್ದರು.

SCROLL FOR NEXT