ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಿನ್ನೆ ನಡೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ರದ್ದಾಗಿದ್ದು, ಈಗ ಮಾರ್ಚ್ 29ಕ್ಕೆ ಮರು ಪರೀಕ್ಷೆ ನಿಗದಿ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿದೆ.
ಸೋಮವಾರ ಪರೀಕ್ಷೆ ಆರಂಭವಾಗುವ ಮುನ್ನವೇ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ರಸಾಯನಶಾಸ್ತ್ರ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷೆ ಇಲಾಖೆ ರದ್ದುಗೊಳಿಸಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಪಿಯು ಮಂಡಳಿ ತನಿಖೆಗೆ ಆದೇಶಿಸಿದ್ದು, ಈ ಸಂಬಂಧ ಈಗಾಗಲೇ ಎರಡು ಕೇಂದ್ರಗಳ ಮುಖ್ಯ ಅಧೀಕ್ಷಕರನ್ನು ಹಾಗೂ ಸಹ ಮುಖ್ಯ ಅಧೀಕ್ಷರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಎರಡೂ ಕೇಂದ್ರಗಳ ಬದಲಾವಣೆಗೂ ಪಿಯು ಮಂಡಳಿ ನಿರ್ಧರಿಸಿದೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಸೋಮವಾರ ಬೆಳಗ್ಗೆ ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.
ಮರು ಪರೀಕ್ಷೆ ಬೇಡ
ರಾಸಾಯನಶಾಸ್ತ್ರ ಮರು ಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮಲ್ಲೇಶ್ವರದಲ್ಲಿರುವ ಪಿಯು ಬೋರ್ಡ್ ಎದುರು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮರು ಪರೀಕ್ಷೆಯಿಂದ ವಿದ್ಯಾರ್ಥಿಗಳು ಮತ್ತೊಮ್ಮೆ ಓದಿ ಬರೆಯಬೇಕಾಗುತ್ತದೆ. ಇಲಾಖೆ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೈ ಜೋಡಿಸಿರುವುದರಿಂದ ಅವರ ಮೇಲೆ ಶಿಸ್ತುಕ್ರಮ ಜರುಗಿಸಿ. ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾತ್ರ ಬೇಡ ಎಂದು ನೂರಾರು ಪೋಷಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ಪೋಷಕರ ಪ್ರತಿಭಟನೆಗೆ ಎಬಿವಿಪಿ ಕೂಡ ಬೆಂಬಲ ನೀಡಿದೆ.