ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಳೆದ ಸೋಮವಾರ ನಡೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ರದ್ದಾಗಿದ್ದು, ಈಗ ಮಾರ್ಚ್ 31ಕ್ಕೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಯನ್ನು ಮಾರ್ಚ್ 29ರ ಬದಲು 31ಕ್ಕೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಮಂಡಳಿ ಈ ಮೊದಲು ಮಾರ್ಚ್ 29ರಂದು ಮರು ಪರೀಕ್ಷೆ ನಡೆಸುವುದಾಗಿ ಹೇಳಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಪಿಯು ಮಂಡಳಿ ತನಿಖೆಗೆ ಆದೇಶಿಸಿದ್ದು, ಈ ಸಂಬಂಧ ಈಗಾಗಲೇ ಎರಡು ಕೇಂದ್ರಗಳ ಮುಖ್ಯ ಅಧೀಕ್ಷಕರನ್ನು ಹಾಗೂ ಸಹ ಮುಖ್ಯ ಅಧೀಕ್ಷರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಎರಡೂ ಕೇಂದ್ರಗಳ ಬದಲಾವಣೆಗೂ ಪಿಯು ಮಂಡಳಿ ನಿರ್ಧರಿಸಿದೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಸೋಮವಾರ ಬೆಳಗ್ಗೆ ಪರೀಕ್ಷೆ ಆರಂಭವಾಗುವ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.