ಪ್ರಧಾನ ಸುದ್ದಿ

ಮಾಜಿ ಪತ್ನಿಗಾಗಿ ಈಜಿಪ್ಟ್ ಏರ್ ವಿಮಾನವನ್ನೇ ಹೈಜಾಕ್ ಮಾಡಿದ ಭೂಪ!

Rashmi Kasaragodu
ಕೈರೋ: ಮಂಗಳವಾರ ಸೈಪ್ರಸ್‌ನಲ್ಲಿ ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿದಾತನಿಗೆ ಉಗ್ರ ಕೃತ್ಯಗಳನ್ನು ಮಾಡುವ ಉದ್ದೇಶವಿಲ್ಲ, ಆತ  ತನ್ನ ಮಾಜಿ ಪತ್ನಿಯನ್ನು ನೋಡಲೆಂದು ವಿಮಾನ ಅಪಹರಣ ಮಾಡಿದ್ದಾನೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಹೈಜಾಕ್ ಮಾಡಿದವನನ್ನು ಈಜಿಪ್ಟ್ ದೇಶದ ಸೈಫ್ ಇಲ್ ದಿನ್ ಮುಸ್ತಾಫಾ ಎಂಬಾತ ಎಂದು ಗುರುತಿಸಲಾಗಿದೆ. 
81 ಮಂದಿ ಪ್ರಯಾಣಿಕರಿದ್ದ ವಿಮಾನವನ್ನು ಈತ ಅಪಹರಿಸಿದ್ದು, ಮಧ್ಯಾಹ್ನದ ಹೊತ್ತಿಗೆ ಒತ್ತೆಯಾಳುಗಳಾಗಿರಿಸಿದ್ದ ಹೆಚ್ಚಿನ ಪ್ರಯಾಣಿಕರನ್ನು ಈತ ಬಂಧಮುಕ್ತಗೊಳಿಸಿದ್ದ. ಆದಾಗ್ಯೂ ಮೂವರು ಪ್ರಯಾಣಿಕರನ್ನು ಮತ್ತು ವಿಮಾನದ ನಾಲ್ಕು ಸಿಬ್ಬಂದಿಗಳನ್ನು ಈತ ಒತ್ತೆಯಾಳಾಗಿರಿಸಿದ್ದಾನೆ ಎಂದು ಈಜಿಪ್ಟ್‌ನ ವಿಮಾನಯಾನ ಸಚಿವ ಶೆರೀಫ್ ಫತೇ ಅತೆಯ್ಯಾ ಹೇಳಿದ್ದಾರೆ.
ಭಯೋತ್ಪದನಾ ಕೃತ್ಯಗಳನ್ನೆಸಗುವ ಉದ್ದೇಶದಿಂದ ಆತ ವಿಮಾನವನ್ನು ಹೈಜಾಕ್ ಮಾಡಲಿಲ್ಲ. ಆತನ ಮಾಜಿ ಪತ್ನಿಯೊಂದಿಗೆ ಜಗಳ ಮಾಡಿ, ಈ ಸಾಂಸಾರಿಕ ಸಮಸ್ಯೆಯಿಂದಲೇ ಈತ ವಿಮಾನ ಹೈಜಾಕ್ ಮಾಡಿದ್ದಾನೆ ಎಂದು ಸೈಪ್ರಸ್ ಸಾರಿಗೆ ಸಂಚಾರ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಅದೇ ವೇಳೆ  ಮುಸ್ತಾಫಾನಿಗೆ ಮಾನಸಿಕ ಸಮಸ್ಯೆ ಇದೆ ಎಂದು ಅವರ ಸಂಬಂಧಿಕರು ಹೇಳುತ್ತಿದ್ದಾರೆ. 
ಇದೀಗ ವಿಮಾನದಲ್ಲಿ ಉಳಿದಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಈಜಿಪ್ಟ್ ಸರ್ಕಾರ ಅಪಹರಣಕಾರನೊಂದಿಗೆ ಸಂಧಾನ ಮಾತುಕತೆಗಳನ್ನು ನಡೆಸುತ್ತಿದೆ.
ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೋಗಿದ್ದ ಎಂಎಸ್ 181  ಏರ್‌ಬಸ್ ವಿಮಾನವನ್ನು ಅಪಹರಣಗೈದ ಮುಸ್ತಾಫಾ ಅದನ್ನು ಸೈಪ್ರಸ್‌ನ ಲರ್ಕಾನೋ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದನು. ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆ, ಅದನ್ನೀಗ ಸ್ಫೋಟ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ಈತ ವಿಮಾನ ಅಪಹರಣ ಮಾಡಿದ್ದನು.
SCROLL FOR NEXT