ಪ್ರಧಾನ ಸುದ್ದಿ

ರಾಜ್ಯಸಭೆಯಿಂದ ವಿಜಯ್ ಮಲ್ಯರನ್ನು ಉಚ್ಚಾಟಿಸಿ: ಸಂಸತ್ ನೀತಿ ಸಂಹಿತೆ ಸಮಿತಿ

Lingaraj Badiger

ನವದೆಹಲಿ: ಸಾಲಬಾಧೆಯಿಂದ ದೇಶ ತೊರೆದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ, ರಾಜ್ಯಸಭಾ ಸದಸ್ಯತ್ವದಿಂದ ಅವರನ್ನು ಉಚ್ಚಾಟಿಸಿ ಎಂದು ಮಂಗಳವಾರ  ಸಂಸತ್ ನೀತಿ ಸಂಹಿತೆ ಸಮಿತಿ ಶಿಫಾರಸು ಮಾಡಿದೆ. ಆದರೆ ಈ ಬಗ್ಗೆ ರಾಜ್ಯಸಭಾ ಅಧ್ಯಕ್ಷರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ, ವಿಜಯ್ ಮಲ್ಯ ಅವರ ರಾಜಿನಾಮೆಯನ್ನು ಅಂಗೀಕರಿಸಲಾಗಿದ್ದು, ನಾಳೆ ರಾಜ್ಯಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವಿಜಯ್ ಮಲ್ಯ ಅವರ ಸದಸ್ಯತ್ವದ ಅವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕಳೆದ ಸೋಮವಾರ ರಾಜ್ಯಸಭಾ ನೀತಿ ಸಂಹಿತೆ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಾಲದ ದೊರೆ ನಿನ್ನೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಮಲ್ಯ ಅವರ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿದ್ದ ಸಂಸತ್ ನೀತಿ ಸಂಹಿತೆ ಸಮಿತಿ, ಸದಸ್ಯತ್ವ ರದ್ದುಗೊಳಿಸುವ ಬಗ್ಗೆ 8 ದಿನಗಳಲ್ಲಿ ಉತ್ತರ ನೀಡುವಂತೆ ನೋಟೀಸ್ ನೀಡಿತ್ತು.

17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಮೂರು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.

SCROLL FOR NEXT