ಬೆಂಗಳೂರು: ಲೋಕಾಯುಕ್ತರ ನಮೇಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ನೂತನ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಮತ್ತೆ ತಿರಸ್ಕರಿಸಿದ್ದಾರೆ.
ಕೆಲ ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ಆದರೆ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ,
ಎಸ್.ಆರ್. ನಾಯಕ್ ಅವರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರದ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.
ನಾಯಕ್ ಅವರ ಹೆಸರನ್ನು ತಿರಸ್ಕರಿಸಿರುವುದಕ್ಕೆ ರಾಜ್ಯಪಾಲರು ತಮ್ಮದೇ ಆದ ಕೆಲ ಕಾರಣಗಳನ್ನು ಪಟ್ಟಿ ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ರಾಜ್ಯಪಾಲರು ಮೂರು ಪುಟಗಳ ಪತ್ರ ಬರೆದಿದ್ದಾರೆ.
ಉಪ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೇಮಕಾತಿ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ, ಈ ತೀರ್ಪಿನ ಅನ್ವಯ ನೂತನ ಲೋಕಾಯುಕ್ತರ ನೇಮಕಾತಿ ಸಂದರ್ಭದಲ್ಲಿ ಲೋಕಾಯುಕ್ತ ಸಲಹಾ ಸಮಿತಿ ಸಭೆಯಲ್ಲಿ ನೂತನ ಲೋಕಾಯುಕ್ತರ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು. ಸಾಧಕ- ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಬೇಕು. ಆದರೆ ಇಲ್ಲಿ ಈ ರೀತಿಯ ಚರ್ಚೆ ಆಗಿಲ್ಲ ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಲೋಕಾಯುಕ್ತರ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರೇ ಏಕೆ ಸೂಕ್ತ ಎಂಬ ಬಗ್ಗೆಯೂ ಸಲಹಾ ಸಮಿತಿಯಲ್ಲಿ ಚರ್ಚೆಯಾಗಿಲ್ಲ. ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆಯೂ ಚರ್ಚೆಯಾಗಿಲ್ಲ. ಆ ಕಾರಣದಿಂದ ನೇಮಕಾತಿಯನ್ನು ನಿಮ್ಮ ಅವಗಾಹನೆಗೆ ಬಿಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಎಸ್.ಆರ್. ನಾಯಕ್ ಅವರು ಈ ಹಿಂದೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಮಾನವ ಹಕ್ಕುಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ಹುದ್ದೆಗಳಿಗೆ ನೇಮಕ ಮಾಡುವಂತಿಲ್ಲ ಎಂಬ ದೂರುಗಳ ಜೊತೆಗೆ ಎಸ್.ಆರ್. ನಾಯಕ್ ಅವರು ವಿರುದ್ಧ ಕೆಲ ಆರೋಪಗಳ ದೂರನ್ನು ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತರು ಬಹು ಹಿಂದೆಯೇ ಸಲ್ಲಿಸಿದ್ದರು.