ಪ್ರಧಾನ ಸುದ್ದಿ

ಲೋಡ್ ಶೆಡ್ಡಿಂಗ್ ಇಲ್ಲ ಎನ್ನುತ್ತಿದ್ದ ಪವರ್ ಮಿನಿಸ್ಟರ್ ಪತ್ರಿಕಾಗೋಷ್ಠಿಯಲ್ಲೇ ಪವರ್ ಕಟ್!

Lingaraj Badiger
ಬೆಂಗಳೂರು: ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆಯೇ ವಿದ್ಯುತ್ ಕಡಿತಗೊಂಡು ತೀವ್ರ ಮುಜುಗರ ಅನುಭವಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆಯೇ ವಿದ್ಯುತ್ ಕಡಿತಗೊಂಡು ಮತ್ತೊಮ್ಮೆ ಮುಖಭಂಗ ಅನುಭವಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಅವೈಜ್ಞಾನಿಕ ಲೋಡ್​ ಶೆಡ್ಡಿಂಗ್ ಇಲ್ಲ ಎಂದು ಹೇಳುತ್ತಿದ್ದ ಸಂದರ್ಭದಲ್ಲೇ ಕರೆಂಟ್ ಕೈಕೊಟ್ಟ ಘಟನೆ ನಡೆಯಿತು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಾಜ್ಯದಲ್ಲಿ ಅವೈಜ್ಞಾನಿಕ ಲೋಡ್​ಶೆಡ್ಡಿಂಗ್ ಇಲ್ಲ ಎಂದು ಹೇಳಿ ವಿದ್ಯುತ್ ಸರಬರಾಜಿನ ನಕ್ಷೆ ತೋರಿಸುತ್ತಿದ್ದರು. ಈ ಸಂದರ್ಭದಲ್ಲೇ ಕರೆಂಟ್​ ಕೈ ಕೊಟ್ಟಿತು. ತಕ್ಷಣವೇ ಪತ್ರಕರ್ತರು ಇದೇನು ಆಟೋಮ್ಯಾಟಿಕ್ ಲೋಡ್​ ಶೆಡ್ಡಿಂಗಾ? ಎಂದು ಕೇಳಿದರು. ಇದಕ್ಕೆ ಉತ್ತರ ನೀಡಲು ಮುಂದಾಗದ ಸಚಿವರು ನಕ್ಕು ಸುಮ್ಮನಾದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರವೇ ಸಾಲ ಸೌಲಭ್ಯ ನೀಡಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಲ್ಲಾ ಮನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ತಮ್ಮ ಕಟ್ಟಡದ ಮೇಲ್ಛಾವಣಿ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು. ಉತ್ಪಾದನೆಯಾಗುವ ಸೋಲಾರ್ ವಿದ್ಯುತ್ ಖರೀದಿ ಮಾಡುವ ದರ ಪರಿಷ್ಕರಣೆ ಮಾಡಲಾಗಿದೆ. ಹಿಂದೆ ನೆಟ್ ಮೀಟರಿಂಗ್ ವ್ಯವಸ್ಥೆ ಇತ್ತು. ಇನ್ನು ಮುಂದೆ ಗ್ರಾಸ್ ಮೀಟರಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಹಿಂದೆ ಪ್ರತಿ ಯೂನಿಟ್‌ಗೆ 9.56 ರೂ. ನೀಡಿ ಖರೀದಿ ಮಾಡಲಾಗುತ್ತಿತ್ತು. ಈಗ ಅದನ್ನು 7.8 ರೂ. ಗೆ ಖರೀದಿ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
SCROLL FOR NEXT