ನವದೆಹಲಿ: ಇತ್ತೀಚೆಗೆ ಸಾಲದ ದೊರೆ ವಿಜಯ ಮಲ್ಯ ಅವರ ರಾಜಿನಾಮೆಯಿಂದ ತೆರವಾದ ಸ್ಥಾನ ಸೇರಿದಂತೆ ರಾಜ್ಯಸಭೆಯ 57 ಸ್ಥಾನಗಳಿಗೆ ಗುರುವಾರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಜೂನ್ 11 ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗ ರಾಜ್ಯಸಭೆಯ 57 ಸ್ಥಾನಗಳಿಗೆ ಮೇ 24 ರಂದು ಅಧಿಸೂಚನೆ ಪ್ರಕಟಿಸುತ್ತಿದ್ದು, ಮೇ 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಕರ್ನಾಟಕದ ನಾಲ್ಕು ಸ್ಥಾನ ಸೇರಿದಂತೆ 15 ರಾಜ್ಯಗಳಲ್ಲಿ ಜೂನ್ನಿಂದ ಆಗಸ್ಟ್ ವರೆಗೆ ತೆರವಾಗಲಿರುವ ಒಟ್ಟು 57 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ.
57 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ನ ತಲಾ 14, ಬಿಎಸ್ಪಿ 6, ಜೆಡಿಯು 6, ಎಸ್ಪಿ, ಬಿಜೆಡಿ ಮತ್ತು ಎಐಎಡಿಎಂಕೆ ಪಕ್ಷಗಳ ತಲಾ 3 ಸ್ಥಾನಗಳಿಗೆ, ಡಿಎಂಕೆ, ಎನ್ಸಿಪಿ ಮತ್ತು ಟಿಡಿಪಿ ಗಳ ತಲಾ 2 ಸ್ಥಾನ, ಶಿವಸೇನಾ 1 ಸ್ಥಾನ ಮತ್ತು ಸ್ವತಂತ್ರ ಅಭ್ಯರ್ಥಿ ವಿಜಯಮಲ್ಯ (ಮೇ 5 ರಂದು ರಾಜೀನಾಮೆ ನೀಡಿದ್ದರು) ಅವರಿಂದ ತೆರವಾಗಿದ್ದ ಸ್ಥಾನಗಳಿಗೆ ಈಗ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೇ 24 ರಂದು ಚುನಾವಣೆ ಅಧಿಸೂಚನೆ ಹೊರಡಲಿದೆ ಎಂದು ಆಯೋಗ ತಿಳಿಸಿದೆ.
ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಬೀರೇಂದ್ರಸಿಂಗ್, ಸುರೇಶ್ ಪ್ರಭು, ನಿರ್ಮಲಾ ಸೀತಾರಾಮ್ ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಮಾಜಿ ಸಚಿವರಾದ ಜೈರಾಮ್ ರಮೇಶ್, ಜೆಡಿಯು ಮುಖಂಡ ಶರದ್ ಯಾದವ್ ಮತ್ತು ಹಿರಿಯ ವಕೀಲ ರಾಮ್ೇಠ್ಮಲಾನಿ ಅವರ ಅವಧಿ ಪೂರ್ಣಗೊಂಡಿದ್ದು ನಿವೃತ್ತರಾಗಲಿದ್ದಾರೆ.