ಪ್ರಧಾನ ಸುದ್ದಿ

ಪಠಾಣ್ ಕೋಟ್-2 ದಾಳಿ ಎದುರಿಸಲು ಸಿದ್ಧರಾಗಿ: ಗುಪ್ತಚರ ಇಲಾಖೆ ಎಚ್ಚರಿಕೆ

Srinivasamurthy VN

ನವದೆಹಲಿ: ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ಭಾರತದಲ್ಲಿ ಮತ್ತೊಂದು ಪಠಾಣ್ ಕೋಟ್ ಮಾದರಿಯ ದಾಳಿಗೆ ಸಂಚು ರೂಪಿಸಿದ್ದು, ಈ ಸಂಚಿಗೆ ಕುಖ್ಯಾತ ಉಗ್ರಗಾಮಿ  ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್ ಮತ್ತು ಜೈಷ್ ಇ ಮೊಹಮದ್ ಸಂಘಟನೆಗಳು ಸಾಥ್ ನೀಡಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಗುಪ್ಕಚರ ಮೂಲಗಳ ಪ್ರಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಈಗಗಾಲೇ ಉತ್ತರ ಭಾರತದ ಕೆಲ ನಗರಗಳಲ್ಲಿರುವ ತನ್ನ ಸ್ಲೀಪರ್ ಸೆಲ್ ಯೋಧರಿಗೆ ನಿರ್ದೇಶನ ನೀಡಿದ್ದು, ಪಠಾಣ್  ಕೋಟ್ ಮತ್ತು ಗುರುದಾಸ್ ಪುರ ದಾಳಿ ಮಾದರಿಯಲ್ಲಿ ಉಗ್ರ ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಐಎಸ್ ಐನ ಈ ಕುಕೃತ್ಯಕ್ಕೆ ಇಂಡಿಯನ್ ಮುಂಜಾಹಿದ್ದೀನ್ ಉಗ್ರ  ಸಂಘಟನೆ ಕೈ ಜೋಡಿಸಿದ್ದು, ಪಾಕ್ ಮೂಲದ ಉಗ್ರ ಸಂಘಟನೆ ಜೈಷ್ ಇ ಮೊಹಮದ್ ಕೂಡ ಇದಕ್ಕೆ ಸಾಥ್ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನು ಪಂಜಾಬ್ ನಲ್ಲಿರುವ ಸರ್ಕಾರಿ ಗುಪ್ತಚರ ಕೇಂದ್ರಕ್ಕೆ ಲಭಿಸಿರುವ ಮಾಹಿತಿಯನ್ವಯ ಜೆಇಎಮ್ ಉಗ್ರ ಸಂಘಟನೆಯ ಕಮಾಂಡರ್ ಅವೈಸ್ ಮಹಮದ್ ನನ್ನು ಈ ಉಗ್ರ ಕಾರ್ಯಾಚರಣೆ  ನೇತೃತ್ವ ವಹಿಸುವ ಸಲುವಾಗಿಯೇ ನಕಲಿ ಪಾಸ್ ಪೋರ್ಟ್ ಮೂಲಕ ಮಲೇಷ್ಯಾಗೆ ಕಳುಹಿಸಿದ್ದು, ಮಲೇಷ್ಯಾ ಮೂಲಕ ಈತ ಭಾರತ ಪ್ರವೇಶ ಮಾಡಲಿದ್ದಾನಂತೆ. ಮೂಲತಃ ಪಾಕಿಸ್ತಾನದ  ಒಕರಾ ಪ್ರಾಂತ್ಯದವನಾದ ಅವೈಸ್ ಮೇಲೆ ಇದೀಗ ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಕಳೆದ ಮೇ18ರಂದು ಪಂಜಾಬ್ ಗುಪ್ತಚರ ಕೇಂದ್ರ ಲಭಿಸಿರುವ ಮಾಹಿತಿಯಂತೆ ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಹೊಸ ಉಗ್ರದಾಳಿಗೆಂದೇ ಪಾಕಿಸ್ತಾನದಲ್ಲಿ ಜೆಇಎಂ ಉಗ್ರ  ಸಂಘಟನೆ ಮತ್ತೆ ಮೂರು ಹೊಸ ತರಬೇತಿ ಕೇಂದ್ರಗಳನ್ನು ತೆರೆದಿದೆಯಂತೆ. ಈ ಮೂರು ಕೇಂದ್ರಗಳು ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿವೆ ಎಂದು  ತಿಳಿದುಬಂದಿದೆ. ಮತ್ತೊಂದು ಮೂಲಗಳ ಪ್ರಕಾರ ಜೆಇಎಂನ ನೂತನ ಮೂರು ಕೇಂದ್ರಗಳು ಕೋಹತ್ ಮತ್ತು ಹಜಾರಾ ಪ್ರಾಂತ್ಯದಲ್ಲಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಾಕೋಟ್  ನಲ್ಲಿರುವ ತನ್ನ ತರಬೇತಿ ಕೇಂದ್ರದ ತರಬೇತಿ ಮಾದರಿಯನ್ನು ಬದಲಿಸಿರುವ ಜೆಇಎಂ ಸಂಘಟನೆ, ಹೊಸ ಮಾದರಿ ದಾಳಿ ತಂತ್ರಗಳನ್ನು ಉಗ್ರರಿಗೆ ಕಲಿಸುತ್ತಿದೆ ಎಂದು ತಿಳಿದುಬಂದಿದೆ.  ಪ್ರಮುಖವಾಗಿ ಜನನಿಭಿಡ ನಗರ ಪ್ರದೇಶಗಳಲ್ಲಿ ಭಾರಿ ಜನಸ್ತೋಮದ ಮಧ್ಯೆ ಹೇಗೆ ದಾಳಿ ನಡೆಸಬೇಕು ಎಂಬುದರ ಕುರಿತು ಜೆಇಎಂ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಮೂಲಗಳು  ತಿಳಿಸಿವೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಇಲ್ಲಿಯವರೆಗೂ ಸುಮಾರು 7,844 ದೂರವಾಣಿ ಕರೆಗಳನ್ನು ರಹಸ್ಯವಾಗಿ ಆಲಿಸಿದ್ದು, ಈ ಪೈಕಿ ಬಹುತೇಕ ದೂರವಾಣಿ  ಸಂಖ್ಯೆಗಳು ಪಾಕಿಸ್ತಾನದ ಬಹಾವಲ್ ಪುರಬಂದಿದ್ದಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಪಠಾಣ್ ಕೋಟ್ ಉಗ್ರ ದಾಳಿ ಮಾದರಿಯ ಮತ್ತೊಂದು ಭಾರಿ ವಿಧ್ವಂಸಕ ಕೃತ್ಯಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ಕೈಹಾಕಿದ್ದು, ಈ ಬಾರಿ ಪಠಾಣ್ ಕೋಟ್ ಗಿಂತಲೂ ಹೆಚ್ಚಿನ  ಹಾನಿ ಮಾಡುವಂತೆ ಉಗ್ರರಿಗೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರಮುಖವಾಗಿ ಉತ್ತರ ಭಾರತದ  ಪ್ರಮುಖ ನಗರಗಲ್ಲಿ ಕಟ್ಟೆಚರದಿಂದ ಇರುವಂತೆ ಸೂಟಿಸಲಾಗಿದೆ.

SCROLL FOR NEXT