ಬೆಂಗಳೂರು: ಲೋಕಾಯುಕ್ತರ ನಮೇಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ನೂತನ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಕ್ರವಾರ ಎರಡನೇ ಬಾರಿ ತಿರಸ್ಕರಿಸಿದ್ದಾರೆ.
ಕೆಲ ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ಆದರೆ ನಾಯಕ್ ಅವರ ಹೆಸರನ್ನು ತಿರಸ್ಕರಿಸಿದ್ದ ರಾಜ್ಯಪಾಲರು, ವಿವರಣೆ ಕೇಳಿ ವಾಪಸ್ ಕಳುಹಿಸಿದ್ದರು.
ನಂತರ ಸ್ಪಷ್ಟನೆ ನೀಡಿದ್ದ ರಾಜ್ಯಸರ್ಕಾರ 2ನೇ ಬಾರಿಯೂ ಎಸ್ ಆರ್ ನಾಯಕ್ ಅವರ ಹೆಸರನ್ನೇ ಲೋಕಾಯುಕ್ತಕ್ಕೆ ನೇಮಕ ಮಾಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಇದೀಗ ಮತ್ತೆ ರಾಜ್ಯಪಾಲರು ಎಸ್ ಆರ್ ನಾಯಕ್ ಅವರ ಶಿಫಾರಸು ಪ್ರಸ್ತಾಪವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿರುವುದಾಗಿ ರಾಜಭವನ ಮೂಲಗಳು ತಿಳಿಸಿವೆ.
ನಾಯಕ್ ಅವರ ಹೆಸರನ್ನು ತಿರಸ್ಕರಿಸಿರುವುದಕ್ಕೆ ರಾಜ್ಯಪಾಲರು ತಮ್ಮದೇ ಆದ ಕೆಲ ಕಾರಣಗಳನ್ನು ಪಟ್ಟಿ ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ರಾಜ್ಯಪಾಲರು ಮೂರು ಪುಟಗಳ ಪತ್ರ ಬರೆದಿದ್ದಾರೆ.
ಎಸ್.ಆರ್. ನಾಯಕ್ ಅವರು ಈ ಹಿಂದೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಮಾನವ ಹಕ್ಕುಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ಹುದ್ದೆಗಳಿಗೆ ನೇಮಕ ಮಾಡುವಂತಿಲ್ಲ ಎಂಬ ದೂರುಗಳ ಜೊತೆಗೆ ಎಸ್.ಆರ್. ನಾಯಕ್ ಅವರ ವಿರುದ್ಧ ಕೆಲ ಆರೋಪಗಳ ದೂರನ್ನು ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತರು ಬಹು ಹಿಂದೆಯೇ ಸಲ್ಲಿಸಿದ್ದರು.