ಪ್ರಧಾನ ಸುದ್ದಿ

ನೀರು, ವಿದ್ಯುತ್ ವ್ಯತ್ಯಯದ ವಿರುದ್ಧ ದೆಹಲಿಯಲ್ಲಿ ಬಿಜೆಪಿ ಪ್ರತಿಭಟನೆ

Guruprasad Narayana

ನವದೆಹಲಿ: ದೇಶದ ರಾಜಧಾನಿಯಲ್ಲಿ ನೀರು ಮತ್ತು ವಿದ್ಯುತ್ ಸರಬರಾಜನ್ನು ಉತ್ತಮಪಡಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಗೃಹದ ಮುಂದೆ ಮಂಗಳವಾರ ಧರಣಿ ನಡೆಸಿದ್ದಾರೆ.

ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧೂರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಯವರ ಗೃಹದ ಎದುರು ನೆರೆದು ಕೇಜ್ರಿವಾಲ್ ಅವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಬಳಸಬೇಕಾಯಿತು ಎಂದು ತಿಳಿದುಬಂದಿದೆ.

"ದೆಹಲಿಯ ಜನ ಅದರಲ್ಲೂ ಮಾನ್ಯತೆಗೊಳ್ಳದ ಪ್ರದೇಶಗಳ ಮತ್ತು ನಿರಾಶ್ರಿತರ ಶಿಬಿರಗಳ ಜನ ಭರವಸೆಯಿಂದ ಕೇಜ್ರಿವಾಲ್ ಸರ್ಕಾರಕ್ಕೆ ಮತ ಹಾಕಿದರು ಆದರೆ ಮುಖ್ಯಮಂತ್ರಿ ಅವರನ್ನೆಲ್ಲ ಸೋಲಿಸಿದ್ದಾರೆ" ಎಂದು ಬಿಧೂರಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯಿದ್ದರೂ ಮಾನ್ಯಗೊಳ್ಳದ ಪ್ರದೇಶಗಳಿಗೆ ಮಾನ್ಯತೆ ನೀಡಲು ಒಂದು ಕಡತವನ್ನೂ ಕೇಜ್ರಿವಾಲ್ ಪರಿಶೀಲಿಸಿಲ್ಲ ಎಂದು ಅವರು ದೂರಿದ್ದಾರೆ.

"ಮಾನ್ಯತೆಯಿಲ್ಲದ ಪ್ರದೇಶಗಳಲ್ಲಿ ವಾಸಿಸುವವರು ಹಲವಾರು ತೊಂದರೆಗಳನ್ನು ಎದುರಿಸಬೇಕಿದೆ. ಅಲ್ಲದೆ ನೀರು ಮತ್ತು ವಿದ್ಯುತ್ ಸರಬರಾಜಿನ ವ್ಯತ್ಯಯದಲ್ಲಿ ಕೇಜ್ರಿವಾಲ್ ಸರ್ಕಾರ ಹಿಂದೆಂದೂ ಕಂಡಿರದಷ್ಟು ಮುಂದಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಈ ವಿಷಯಗಳೆಡೆಗೆ ಗಮನ ಹರಿಸದಿದ್ದರೆ ಭಾರಿ ಪ್ರತಿಭಟನೆ ಎದುರಿಸಲು ಸಿದ್ಧರಾಗಿ ಎಂದು ಬಿಧೂರಿ, ಕೇಜ್ರಿವಾಲ್ ಅವರನ್ನು ಎಚ್ಚರಿಸಿದ್ದಾರೆ.

SCROLL FOR NEXT