ಪ್ರಧಾನ ಸುದ್ದಿ

ನೋಟು ಹಿಂಪಡೆತ; ಜನರ ತೊಂದರೆಗಳನ್ನು ಚರ್ಚಿಸಿದ ಮಮತಾ ಮತ್ತು ಠಾಕ್ರೆ

Guruprasad Narayana
ಮುಂಬೈ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಶಿವಸೇನಾ ಪಕ್ಷದ ಸಂಸದ ಸಂಜಯ್ ರಾವುತ್ ಮಂಗಳವಾರ ಹೇಳಿದ್ದಾರೆ.
"ಇದು ಸರ್ಕಾರ ವಿರೋಧಿ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರೋಧಿ ನಡೆ ಅಲ್ಲ. ಇದು ೧೨೫ ಕೋಟಿ ಭಾರತೀಯರು ಮತ್ತು ಸದ್ಯಕ್ಕೆ ಅವರು ಒಳಗಾಗಿರುವ ತೊಂದರೆಗೆ ಸಂಬಂಧಿಸಿದ ವಿಷಯ. ಇದರ ಬಗ್ಗೆ ಪ್ರತಿ ಪಕ್ಷಕ್ಕೂ ಕಾಳಜಿಯಿದೆ" ಎಂದು ಠಾಕ್ರೆ ಮತ್ತು ಬ್ಯಾನರ್ಜಿ ನಡುವೆ ನಡೆದ ಸಂಭಾಷಣೆಯನ್ನು ಬಿಟ್ಟುಕೊಡದ ರಾವುತ್ ಹೇಳಿದ್ದಾರೆ. 
ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ-ಎನ್ ಡಿ ಎ ಸರ್ಕಾರದ ಭಾಗ ಶಿವಸೇನೆ. ಆದರೂ ನೋಟು ರದ್ದತಿ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದೆ. 
ಈ ನಿರ್ಧಾರ ಆರ್ಥಿಕ ಅರಾಜಕತೆ ಎಂದು ಕಳೆದ ಮಂಗಳವಾರ (ನವೆಂಬರ್ ೮) ಹೇಳಿದ್ದ ಹೇಳಿದ್ದ ಸಂಜಯ್, ಈ ಒಂದು ವಾರದಲ್ಲಿ ಸಮಾಜದ ಎಲ್ಲ ವರ್ಗದ ಜನತೆಗೆ ತೊಂದರೆಯಾಗಿದೆ ಎಂದಿದ್ದಾರೆ. ಈ ರದ್ದತಿ "ಖಾಯಿಲೆಗಿಂತಲೂ ಕೆಟ್ಟ ಔಷಧಿ" ಎಂದಿರುವ ರಾಜ್ಯಸಭಾ ಸದಸ್ಯ ಜನರ ತೊಂದರೆಯನ್ನು ತಮ್ಮ ಪಕ್ಷ ಸುಮ್ಮನೆ ನೋಡಿ ಕುಳಿತುಕೊಳ್ಳುವುದಿಲ್ಲ ಬದಲಾಗಿ ನಮ್ಮ ಮುಂದಿನ ಕ್ರಮವನ್ನು ಘೋಷಿಸುತ್ತೇವೆ ಎಂದಿದ್ದಾರೆ. 
ನಂತರ ತುರ್ತಾಗಿ ಕರೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಠಾಕ್ರೆ ಶಿವಸೇನೆ ಮೋದಿ ವಿರೋಧಿಯಲ್ಲ ಆದರೆ ದೇಶದ ಸಾಮಾನ್ಯ ಜನರ ಬದುಕು ಸಾವಿನ ಪ್ರಶ್ನೆ ಇದು ಎಂದಿದ್ದಾರೆ. 
ಪರೋಕ್ಷವಾಗಿ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಠಾಕ್ರೆ "ಮೋದಿ, ಶರದ್ ಪವಾರ್ (ಎನ್ ಸಿ ಪಿ) ಅಧ್ಯಕ್ಷರ ಸಖ್ಯ ಬಯಸಬಹುದಾದರೆ ಶಿವಸೇನೆ, ಬ್ಯಾನರ್ಜಿ ಅವರನ್ನು ಸೇರುವುದರಲ್ಲಿ ತಪ್ಪೇನು?" ಎಂದಿದ್ದಾರೆ. 
ಜನರ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಷಯವನ್ನು ರಾಷ್ಟ್ರಪತಿ ಅವರಲ್ಲಿಗೆ ಬಹು ಪಕ್ಷಗಳ ನಿಯೋಗವನ್ನು ಕೊಂಡೊಯ್ಯಲು ಬ್ಯಾನರ್ಜಿ ಜೊತೆಗೆ ಶಿವಸೇನೆ ಒಟ್ಟಾಗಲು ಸಿದ್ಧವಿದೆ ಎಂದು ಕೂಡ ಠಾಕ್ರೆ ಹೇಳಿದ್ದಾರೆ. 
SCROLL FOR NEXT