ಅಮೃತಸರ: ಪಂಜಾಬ್ ನಲ್ಲಿರುವ ನಭಾ ಜೈಲಿಗೆ ನುಗ್ಗಿ ಖಲಿಸ್ತಾನ ಉಗ್ರಗಾಮಿಗಳನ್ನು ಬಿಡಿಸಿಕೊಂಡು ಪರಾರಿಯಾದ ಉಗ್ರರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ನಭಾ ಜೈಲು ಸೂಪರಿಂಟೆಂಟ್ ಹಾಗೂ ಉಪ ಜೈಲು ಅಧಿಕಾರಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.
ಉಗ್ರರ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾಬ್ ಸರ್ಕಾರ, ಜೈಲು ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದೆ. ಕರ್ತವ್ಯ ಲೋಪದ ಮೇರೆಗೆ ಗೃಹಖಾತೆಯನ್ನೂ ಹೊಂದಿರುವ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಬಾದಲ್ ಅವರು, ಜೈಲು ಅಧೀಕ್ಷಕ ಹಾಗೂ ಉಪ ಜೈಲು ಅಧೀಕ್ಷಕರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ಪರಾರಿಯಾದ ಉಗ್ರರಿಗಾಗಿ ಬಲೆ ಬೀಸಲಾಗಿದ್ದು, ಉಗ್ರ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಅಲ್ಲದೆ ಮೂರು ದಿನಗಳಲ್ಲಿ ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉಗ್ರರು ಪರಾರಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಪಂಜಾಬ್ ನಾದ್ಯಂತ ನಾಕಾಬಂದಿ ಹಾಕಲಾಗಿದ್ದು, ಪಂಜಾಬ್ ನಿಂದ ಇತರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಅಂತೆಯೇ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳ ಆಧಾರದ ಮೇಲೆ ಪರಾರಿಯಾಗಿರುವ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ. ಕರ್ತವ್ಯ ಲೋಪ ಸಾಬೀತಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೂ ಕೂಡ ಪಂಜಾಬ್ ಸರ್ಕಾರ ಮುಂದಾಗಿದೆ.