ಜಮ್ಮು: ಜಮ್ಮು ಸೇನಾ ನೆಲೆಯ ಮೇಲೆ ದಾಳಿ ಮಾಡಿ ಹತ್ಯೆಯಾಗಿದ್ದ ಮೂವರು ಭಯೋತ್ಪಾದಕರು ಬಿಟ್ಟು ಹೋಗಿದ್ದ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಇನ್ನು ಹೆಚ್ಚು ಸ್ಪೋಟಕಗಳನ್ನು ಅಡಗಿಸಿಟ್ಟಿರುವ ಸಾಧ್ಯತೆ ಇದ್ದು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆ ತಿಳಿಸದೆ.
"ಬಾಂಬ್ ನಿಷ್ಕ್ರಿಯ ದಳ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದೆ" ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕಲ್ನಲ್ ಮನೀಶ್ ಮೆಹ್ತಾ ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ಮುಗಿಯುತ್ತಾ ಬಂದಿದೆ ಎಂದು ಕೂಡ ಅವರು ತಿಳಿಸಿದ್ದು, ಸೇನಾ ಮತ್ತು ಭಯೋತ್ಪಾದಕರ ನಡುವೆ ೧೪ ಘಂಟೆಗಳ ಗುಂಡಿನ ಕಾಳಗದ ನಂತರ ಈ ಪ್ರದೇಶ ಈಗ ಭಯೋತ್ಪಾದಕರಿಂದ ಮುಕ್ತವಾಗಿದೆ ಎಂದಿದ್ದಾರೆ.
ಪೊಲೀಸ್ ಸಮವಸ್ತ್ರ ಧರಿಸಿ ನಗರೋಟ ಸೇನಾ ನೆಲೆಗೆ ದಾಳಿಯಿಟ್ಟಿದ್ದ ಆತ್ಮಹತ್ಯಾ ದಳದ ಭಯೋತ್ಪಾದಕರು ಮಂಗಳವಾರ ಬೆಳಗ್ಗೆ ಏಳು ಜನ ಸೈನಿಕರನ್ನು ಕೊಂಡಿದ್ದರು. ಎಲ್ಲ ಮೂವರು ದಾಳಿಕೋರರನ್ನು ಹತ್ಯೆಗೈಯ್ಯಲಾಗಿದೆ.
ಈ ದಾಳಿಯಲ್ಲಿ ಮೃತಪಟ್ಟ ಸೈನಿಕರಲ್ಲಿ ಮೇಜರ್ ಗೋಸಾವಿ ಕುನಾಲ್ ಮಣ್ಣಾದೀರ್ ಮತ್ತು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಕೂಡ ಸೇರಿದ್ದಾರೆ. ಹುತಾತ್ಮರಾದ ಇತರ ಸೈನಿಕರು ಹವಾಲ್ದಾರ್ ಸುಖರಾಜ್ ಸಿಂಗ್, ಲಾನ್ಸ್ ನಾಯಕ್ ಕದಂ ಸ್ಯಾಮ್ ಭಾಜಿ ಯೆಶವಂತರಾವ್, ಗ್ರೆನೇಡಿಯರ್ ರಾಘವೇಂದ್ರ ಸಿಂಗ್ ಮತ್ತು ರೈಫಲ್ ಮ್ಯಾನ್ ಅಜಿಮ್ ರೈ.