ನವದೆಹಲಿ: ಕಳೆದ ಸೆ.30ರಂದು ನಾಲ್ಕು ದಿನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಗೆ ತೀವ್ರ ಹಿನ್ನೆಡೆಯಾಗಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರಕ್ಕೆ ಸೂಚಿಸುವ ಅಧಿಕಾರ ಸುಪ್ರೀಂಗೆ ಇಲ್ಲ ಎಂದು ಸೋಮವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಕಾವೇರಿ ನೀರು ವಿವಾದ ನ್ಯಾಯಾಧೀಕರಣದ ಶಿಫಾರಸು ಅಷ್ಟೆ, ಕೇಂದ್ರ ಸರ್ಕಾರ ಅದಕ್ಕೆ ಬದ್ಧವಾಗಿಲ್ಲ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.
ಸೆಪ್ಟೆಂಬರ್ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸ್ವತಃ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಕಳೆದ ವಿಚಾರಣೆ ಅಕ್ಟೋಬರ್ 4ರೊಳಗೆ ಮಂಡಳಿ ರಚಿಸುವುದಾಗಿ ಒಪ್ಪಿಕೊಂಡ್ದಿದ್ದೀರಿ? ಎಂದು ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರೋಹ್ಟಗಿ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವುದಾಗಿ ಹೇಳಿ ತಪ್ಪು ಮಾಡಿದೆ ಎಂದರು.
ಈ ಸಂಬಂಧ ಕೋರ್ಟ್ ಅಫಿಡವಿಟ್ ಸಲ್ಲಿಸಿದ ರೋಹ್ಟಗಿ ಅವರು, ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸುವಂತಿಲ್ಲ. ಮಂಡಳಿ ರಚನೆ ಏನಿದ್ದರೂ ಸಂಸತ್ತಿನ ಜವಾಬ್ದಾರಿಯಾಗಿದ್ದು, ಉಭಯ ಸದನಗಳ ಅನುಮೋದನೆ ಪಡೆದು ಮಂಡಳಿ ರಚಿಸಬೇಕಿದೆ ಎಂದು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಇದುವರೆಗೂ ಏಕೆ ನೀರು ಬಿಟ್ಟಿಲ್ಲ ಎಂದು ಕರ್ನಾಟಕ ಸರ್ಕಾರವನ್ನು ಪ್ರಶ್ಮಿಸಿದ ಕೋರ್ಟ್, ಮೊದಲು ಕೋರ್ಟ್ ಆದೇಶ ಉಲ್ಲಂಘಿಸುತ್ತಿರುವುದನ್ನು ನಿಲ್ಲಿಸಿ. ತಮಿಳುನಾಡಿಗೆ ನೀರು ಬಿಡುವ ಕುರಿತು ಸೂಕ್ತ ತೀರ್ಮಾನ ಕೈಗೊಂಡು ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸೂಚಿಸಿದೆ.