ರಕ್ಷಣಾ ಸಚಿವ ಮನೋಹರ್ ಪರ್ರಿಕರ್
ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ಶ್ರೇಯಸ್ಸಿನ ದೊಡ್ಡ ಭಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂಬ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಹೇಳಿಕೆಯನ್ನು ಬುಧವಾರ ಖಂಡಿಸಿರುವ ವಿರೋಧ ಪಕ್ಷಗಳು, ಬಿಜೆಪಿ ಈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
"ಬಿಜೆಪಿ ಪಕ್ಷದ ಎರಡು ನಾಲಿಗೆಯ ಪ್ರದರ್ಶನ ಇದು. ಅವರದ್ದು ಇಂದಿಗೂ ಎರಡು ಮಾತು" ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಹೇಳಿದ್ದಾರೆ.
"ಈ ದಾಳಿಯ ಬಗ್ಗೆ ಎದೆ ತಟ್ಟಿಕೊಳ್ಳುವ ಅವಶ್ಯಕತೆ ಇಲ್ಲ ಎಂಬ ನಿಲುವನ್ನು ಮೋದಿ ವ್ಯಕ್ತಪಡಿಸುತ್ತಾರೆ ಆದರೆ ಅವರ ಸಂಪುಟ ಸಚಿವರು ಮತ್ತು ಕಾರ್ಯಕರ್ತರು ಅವರು ದೇವಮಾನವ ರಾಮ ಎಂದು ಪೋಸ್ಟರ್ ಗಳನ್ನು ಹಚ್ಚುತ್ತಾರೆ" ಎಂದು ಝಾ ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣಾ ಲಾಭಕ್ಕಾಗಿ ಈ ನಿರ್ಧಿಷ್ಟ ದಾಳಿಗಳನ್ನು ಬಿಜೆಪಿ ಪಕ್ಷ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮುಂಬೈನ ಒಂದು ಕಾರ್ಯಕ್ರಮದಲ್ಲಿ ಭದ್ರತಾ ಸಚಿವ ಮನೋಹರ್ ಪರ್ರಿಕರ್ "ಗಡಿ ರೇಖೆಯಲ್ಲಿ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ಶ್ರೇಯಸ್ಸಿನ ದೊಡ್ಡ ಭಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು" ಎಂದಿದ್ದ ಹೇಳಿಕೆಗೆ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.
"ಈ ಹಿಂದೆ ಕೂಡ ನಿರ್ದಿಷ್ಟ ದಾಳಿಗಳು ನಡೆದಿರುವುದಕ್ಕೆ ಆಪರೇಷನ್ ಜಿಂಜರ್ (2011) ಸಾಕ್ಷಿ" ಎಂದು ಕೂಡ ಝಾ ಹೇಳಿದ್ದಾರೆ.
2011 ರಲ್ಲಿ 'ಆಪರೇಷನ್ ಜಿಂಜರ್' ಹೆಸರಿನಲ್ಲಿ ನಡೆದಿದ್ದ ದಾಳಿಯಲ್ಲಿ ಕನಿಷ್ಠ 8 ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದಲ್ಲದೆ ಮತ್ತೆ ಹಲವರು ಗಾಯಗೊಂಡಿದ್ದರು.
ಕಾಂಗ್ರೆಸ್ ಆರೋಪಗಳನ್ನು ಧ್ವನಿಸಿರುವ ಸಿಪಿಐ ಮುಖಂಡ ಡಿ ರಾಜ ಕೂಡ "ರಾಜಕೀಯ ಲಾಭಕ್ಕಾಗಿ ನಿರ್ಧಿಷ್ಟ ದಾಳಿಗಳನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ" ಎಂದು ಹೇಳಿದ್ದಾರೆ.
"ಭಾರತೀಯ ಸೇನೆ ಸಿಕ್ಕಬೇಕಾದ ಖ್ಯಾತಿಯನ್ನು ಹಂಚುವುದೇಕೆ? ದಾಳಿ ನಡೆಸಿದ್ದು ಭಾರತೀಯ ಸೇನೆ ಬೇರೆ ಯಾವುದೋ ರಾಜಕೀಯ ಪಕ್ಷದ ಸೇನೆಯಲ್ಲ" ಎಂದು ಕೂಡ ಸಿಪಿಐ ಮುಖಂಡ ಹೇಳಿದ್ದಾರೆ.