ಪ್ರಧಾನ ಸುದ್ದಿ

ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ: ಅಮೆರಿಕ

Srinivasamurthy VN

ವಾಷಿಂಗ್ಟನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೀಮಿತ ದಾಳಿ ನಡೆಸಿರುವ ಭಾರತದ ಕ್ರಮಕ್ಕೆ ಮತ್ತೊಮ್ಮೆ ಅಮೆರಿಕ ಬೆಂಬಲ ಘೋಷಿಸಿದ್ದು, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ  ಎಂದು ಹೇಳಿದೆ.

ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಆಫ್ಘಾನಿಸ್ತಾನ ಗಡಿ ಹಾಗೂ ಗಲಭೆಯಿಂದ ಕೂಡಿರುವ ಕಾಶ್ಮೀರ ಕುರಿತಂತೆ ನಿರ್ಣಯ ಕೈಗೊಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ತಳ್ಳಿ ಹಾಕಿರುವ ವೈಟ್  ಹೌಸ್, "ಯಾವುದೇ ದೇಶಕ್ಕೆ ತನ್ನ ಸ್ವರಕ್ಷಣೆಯ ಹಕ್ಕಿರುತ್ತದೆ. ಉರಿ ಉಗ್ರದಾಳಿ ಗಡಿಯಾಚೆಗಿನ ಭಯೋತ್ಪಾದನೆ ಎಂಬುದು ಸ್ಪಷ್ಟವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ  ಅಡಗುದಾಣಗಳ ಮೇಲೆ ಭಾರತ ನಡೆಸಿರುವ ದಾಳಿಯಲ್ಲಿ ಯಾವುದೇ ತಪ್ಪಿಲ್ಲ" ಎಂದು ಹೇಳಿದೆ.

ಇದೇ ವೇಳೆ ಭಾರತದ ಎನ್ ಎಸ್ ಜಿ ಸೇರ್ಪಡೆ ಕುರಿತಂತೆ ಮಾಹಿತಿ ನೀಡಿರುವ ವೌಟ್ ಹೌಸ್ ನ ದಕ್ಷಿಣ ಏಷ್ಯಾದ ವಕ್ತಾರ ಪೀಟರ್ ಲವಾಯ್, ಇದೇ ವರ್ಷಾಂತ್ಯದೊಳಗೆ ಭಾರತವನ್ನು ಎನ್  ಎಸ್ ಜಿ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ತಮ್ಮ ಪ್ರಯತ್ನ ಮುಂದುವರೆಯಲಿದೆ ಎಂದು ಹೇಳಿದೆ. ಇದೇ ವೇಳೆ ಭಾರತ ತನ್ನ ಅತ್ಯಾಪ್ತ ರಾಷ್ಟ್ರಗಳಲ್ಲಿ ಒಂದಾಗಿದ್ದು, ಅಧ್ಯಕ್ಷ ಬರಾಕ್ ಒಬಾಮ  ಅವರ ಆಡಳಿತಾವಧಿಯಲ್ಲಿ ಭಾರತ ಹಾಗೂ ಅಮೆರಿಕ ರಾಷ್ಟ್ರಗಳು ಈ ಹಿಂದೆಂದಿಗಿಂತಲೂ ಸೌಹಾರ್ಧಯುತವಾಗಿ ಪರಿಣಾಮಕಾರಿ ಕಾರ್ಯ ನಿರ್ವಹಿಸಿದ್ದವು ಎಂದು ಹೇಳಿದ್ದಾರೆ.

"ಭವಿಷ್ಯದ ಉಗ್ರ ದಾಳಿಗಳ ಕುರಿತು ಭಾರತದೊಂದಿಗೆ ನಾವು ಚರ್ಚಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದೇವೆ.  ಪ್ರಸ್ತುತ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದ್ದು, ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಲವಾಯ್ ಹೇಳಿದ್ದಾರೆ.

SCROLL FOR NEXT