ಕೇಂದ್ರ ಭದ್ರತಾ ಸಚಿವ ಮನೋಹರ್ ಪರ್ರಿಕರ್
ನವದೆಹಲಿ: ಸೇನೆಗೆ ನೀಡುವ ದೇಣಿಗೆಗಳೆಲ್ಲಾ ಸ್ವಯಂಪ್ರೇರಿತವಾಗಿರಬೇಕು ಎಂದು ಸ್ಪಷ್ಟನೆ ನೀಡಿರುವ ಕೇಂದ್ರ ಭದ್ರತಾ ಸಚಿವ ಮನೋಹರ್ ಪರ್ರಿಕರ್ ಕುತ್ತಿಗೆ ಹಿಡಿದು ದೇಣಿಗೆ ನೀಡುವಂತೆ ಒತ್ತಡ ಹೇರುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನಿ ನಟರನ್ನು ತೊಡಗಿಸಿಕೊಂಡ ನಿರ್ಮಾಪಕರು ಸೇನಾ ಕಲ್ಯಾಣ ನಿಧಿಗೆ 5 ಕೋಟಿ ರೂ ದಂಡ ನೀಡಬೇಕು ಅಂದು ಆದೇಶಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಖಾಜಿ ನ್ಯಾಯದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯಕ್ಕೆ ಸೇನೆಯನ್ನು ಎಳೆದಿರವಿದು ಸರಿಯಲ್ಲ ಎಂದು ಕೂಡ ಅವರು ಹೇಳಿದ್ದು "ಬೇಕಿರುವುದು ಸ್ವಯಂಪ್ರೇರಿತ ದೇಣಿಗೆ, ಕುತ್ತಿಗೆ ಹಿಡಿದು ಕೊಡುವಂತೆ ಬೆದರಿಸುವುದಲ್ಲ. ಅದನ್ನು ನಾವು ಒಪ್ಪುವುದಿಲ್ಲ" ಎಂದು ನೌಕಾ ಕಮಾಂಡರ್ ಗಳ ಸಮಾವೇಶದ ಸಮಯದಲ್ಲಿ ವರದಿಗಾರರಿಗೆ ಹೇಳಿದ್ದಾರೆ.
ಹೊಸದಾಗಿ ಪರಿಚಯಿಸಲಾಗಿರುವ ಯುದ್ಧ ಅವಘಡ ನಿಧಿಯ ಪರಿಕಲ್ಪನೆ ಇರುವುದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡುವ ಸ್ವಇಚ್ಛೆ ಇರುವವರು ದೇಣಿಗೆ ನೀಡಲಿ ಎಂದು ಕೂಡ ಅವರು ಹೇಳಿದ್ದಾರೆ.
ಪಾಕಿಸ್ತಾನಿ ನಟ ಫವದ್ ಖಾನ್ ನಟಿಸಿದ್ದಾರೆ ಎಂದು ಕರಣ್ ಜೋಹರ್ ಅವರ 'ಏ ದಿಲ್ ಹೈ ಮುಷ್ಕಿಲ್' ಸಿನೆಮಾ ಬಿಡುಗಡೆಗೆ ಅಡ್ಡಿಪಡಿಸುವುದಾಗಿ ತಿಳಿಸಿದ್ದ ಎಂ ಎನ್ ಎಸ್ ಅಧ್ಯಕ್ಷ ರಾಜ್ ಠಾಕ್ರೆ, ನಂತರ ಸೇನಾ ಕಲ್ಯಾಣ ನಿಧಿಗೆ 5 ಕೋಟಿ ದಂಡ ಕಟ್ಟಿದರೆ ಬಿಡುಗಡೆಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಇದಕ್ಕೆ ಸೇನೆಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು.
"ಎಲ್ಲ ದೇಣಿಗೆಗಳು (ಕಲ್ಯಾಣ ನಿಧಿಗೆ) ಸ್ವಯಂಪ್ರೇರಿತವಾಗಿರಬೇಕು. ಬೆದರಿಕೆಯ ಹಣಕ್ಕೆ ಇಲ್ಲಿ ಅವಕಾಶವಿಲ್ಲ. ಯಾವುದೇ ಒತ್ತಡವಿಲ್ಲದೆ ಜನ ಇದಕ್ಕೆ ಹಣ ನೀಡಿದರೆ ಮಾತ್ರ ಒಪ್ಪಿಕೊಳ್ಳುತ್ತೇವೆ" ಎಂದು ಹಿರಿಯ ಸೇನಾ ಅಧಿಕಾರಿ ಕೂಡ ಹೇಳಿದ್ದರು.
ಎಲ್ಲ ದೇಣಿಗೆಗಳನ್ನು ಪರಿವೀಕ್ಷಣೆ ಮಾಡಲಾಗುತ್ತದೆ ಮತ್ತು ಯಾವುದೇ ಒತ್ತಡದಲ್ಲಿ ನೀಡಿದ ಹಣವನ್ನು ಅಥವಾ ಸೇನೆ ಗುರುತಿಸಿಕೊಳ್ಳಲು ಇಚ್ಛಿಸದವರಿಂದ ಬಂದ ದೇಣಿಗೆಯನ್ನು ತಿರಸ್ಕರಿಸಲಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.