ಪ್ರಧಾನ ಸುದ್ದಿ

ಜಿಎಸ್ ಟಿ ಮಸೂದೆಗೆ ರಾಷ್ಚ್ರಪತಿ ಪ್ರಣಬ್ ಮುಖರ್ಜಿ ಅಂಕಿತ

Lingaraj Badiger
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಸಹಿ ಹಾಕಿದ್ದಾರೆ.
ಐತಿಹಾಸಿಕ ಜಿಎಸ್ ಟಿ ಮಸೂದೆಗೆ ರಾಷ್ಟ್ರಪತಿಗಳು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹತ್ವದ ಜಿಎಸ್ ಟಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಲಾಗಿತ್ತು. ಈ ವಿಧೇಯಕಕ್ಕೆ ಈಗಾಗಲೇ 16 ರಾಜ್ಯಗಳು ಒಪ್ಪಿಗೆ ನೀಡಿದ್ದರಿಂದ ಶೇ.50 ರಷ್ಟು ರಾಜ್ಯಗಳ ಒಪ್ಪಿಗೆ ಸಿಕ್ಕಂತಾಗಿತ್ತು. ಹೀಗಾಗಿ ರಾಷ್ಟ್ರಪತಿಗಳು ಇಂದು ತಮ್ಮ ಅಂಕಿತ ಹಾಕಿದ್ದಾರೆ. 
ಕೇಂದ್ರ ಸರ್ಕಾರ ಈ ಜಿಎಸ್ ಟಿಯನ್ನು 2017ರ ಏಪ್ರಿಲ್ 1ರಿಂದ ಜಾರಿಗೊಳಿಸಲು ಚಿಂತಿಸುತ್ತಿದ್ದು, ಕಳೆದ ಆಗಸ್ಟ್ 8ರಂದು ಈ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಂಡಿತ್ತು. ಬಳಿಕ 16 ರಾಜ್ಯಗಳು ಇದಕ್ಕೆ ಅನುಮೋದಿಸಿದ್ದವು. ಇದು ಸಾಂವಿಧಾನಿಕ ತಿದ್ದುಪಡಿಯಾಗಿದ್ದರಿಂದ ಶೇ.50ರಷ್ಟು ರಾಜ್ಯಗಳ ಅನುಮೋದನೆಯ ಅಗತ್ಯ ಇತ್ತು.
SCROLL FOR NEXT