ಪ್ರಧಾನ ಸುದ್ದಿ

ಮಾಜಿ ಸಚಿವ ಸೋಮಣ್ಣ ವಿರುದ್ಧ ಎಸಿಬಿ ತನಿಖೆಗೆ ಲೋಕಾಯುಕ್ತ ಕೋರ್ಟ್ ಆದೇಶ

Lingaraj Badiger
ಬೆಂಗಳೂರ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಆದೇಶಿಸಿದೆ.
ಸೋಮಣ್ಣ ಅವರ ವಿರುದ್ಧ ಮೂಡಲಪಾಳ್ಯದ ರಾಮಕೃಷ್ಣ ಎಂಬುವರು ಲೋಕಾಯುಕ್ತ ಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಚುನಾವಣಾ ಆಯೋಗ ಹಾಗೂ ಲೋಕಾಯುಕ್ತಕ್ಕೆ ಈ ಹಿಂದೆ ಸಲ್ಲಿಸಲಾದ ಆಸ್ತಿ ವಿವರಕ್ಕೂ ಇಂದಿನ ಆಸ್ತಿ ವಿವರಕ್ಕೂ ಶೇ205 ರಷ್ಟು ಏರಿಕೆ ಕಂಡು ಬಂದಿದೆ ಎಂದು ಆರೋಪಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಕೋರ್ಟ್, ಸೋಮಣ್ಣ ಅವರ ವಿರುದ್ಧ ತನಿಖೆ ನಡೆಸಿ ಡಿಸೆಂಬರ್ 17ರೊಳಗೆ ವರದಿ ಸಲ್ಲಿಸುವಂತೆ ಎಸಿಬಿಗೆ ಸೂಚಿಸಿದೆ.
ಸೋಮಣ್ಣ ಅವರು ದೊಡ್ಡಬಳ್ಳಾಪುರ ಬಳಿ 40 ಎಕರೆ ಅಕ್ರಮ ಭೂಮಿ ಹೊಂದಿರುವ ಆರೋಪ ಕೇಳಿ ಬಂದಿತ್ತು. ಆದರೆ, ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ತಿರಸ್ಕರಿಸಿದ್ದ ಲೋಕಾಯುಕ್ತ ನ್ಯಾಯಾಧೀಶರು ಎಲ್ಲ ಆರೋಪಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು. ಕರ್ನಾಟಕ ಚುನಾವಣಾ ಕಾವಲು (ಕೆಇಡಬ್ಲ್ಯೂ) ಸಂಸ್ಥೆ 2004 ರಿಂದ 2008 ರ ತನಕದ ಅದಾಯ ಘೋಷಣೆ ಮಾಡಿರುವ ಶಾಸಕರ ಮಾಹಿತಿ ವಿಶ್ಲೇಷಣೆ ಮಾಡಿ ವಿವರ ಬಹಿರಂಗ ಮಾಡಿದೆ. ಇದರಲ್ಲಿ ಕರ್ನಾಟಕದ ಕೋಟಿ ಗಳಿಕೆ ಮಾಡಿರುವ ಶಾಸಕ, ಸಚಿವರ ವಿವರಗಳಿದೆ. ವಿ. ಸೋಮಣ್ಣ ಅವರ ಹೆಸರು ಕೂಡಾ ಈ ಪಟ್ಟಿಯಲ್ಲಿ ಕಾಣಿಸಿದೆ. ಚರಾಸ್ತಿ 9.16 ಕೋಟಿ ಹಾಗೂ ಸ್ಥಿರಾಸ್ತಿ 1.83 ಕೋಟಿ ರು ಘೋಷಿತ ಆಸ್ತಿಯಾಗಿದೆ. ಈಗ ಈ ಮೊತ್ತ ಶೇ 205ರಷ್ಟು ಏರಿಕೆಯಾಗಿದೆ.
SCROLL FOR NEXT