ನ್ಯೂಯಾರ್ಕ್: ಉರಿ ಸೆಕ್ಟರ್ ಮೇಲಿನ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದಕ್ಕೆ ತುಪ್ಪ ಸುರಿಯುವ ಕೆಲಸವೊಂದನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌದರಿ ಮಾಡಿದ್ದಾರೆ.
ನ್ಯೂಯಾರ್ಕ್ ರೂಸ್ ವೆಲ್ಟ್ ಹೊಟೆಲ್ ನಲ್ಲಿ ಏರ್ಪಡಿಸಲಾಗಿದ್ದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಿಂದ ಭಾರತೀಯ ಪತ್ರಕರ್ತೆಯೊಬ್ಬರನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌದರಿ ಹೊರ ಕಳುಹಿಸಿದ್ದಾರೆ. ಎನ್ ಡಿಟಿವಿ ಸುದ್ದಿವಾಹಿನಿಯ ಪತ್ರಕರ್ತೆ ನಮ್ರತಾ ಬ್ರಾರ್ ರನ್ನು ಸುದ್ದಿಗೋಷ್ಠಿಯಿಂದ ಹೊರಗಟ್ಟಲಾಗಿದ್ದು, ಕೇವಲ ಅವರು ಮಾತ್ರವವಲ್ಲದೇ ಎಜಾಜ್ ಅಹ್ಮದ್ ಚೌದರಿ ಅವರ ಸುದ್ದಿಗೋಷ್ಠಿಯಲ್ಲಿ ಯಾವೊಬ್ಬ ಭಾರತೀಯ ಪತ್ರಕರ್ತನೂ ಪಾಲ್ಗೊಳ್ಳುದಂತೆ ನೋಡಿಕೊಳ್ಳಲಾಗಿದೆ.
ಪಾಕ್ ವಿದೇಶಾಂಗ ಕಾರ್ಯದರ್ಶಿ ಚೌದರಿ ಅವರ ಈ ಕ್ರಮಕ್ಕೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಭಾರತೀಯ ಪತ್ರಕರ್ತರು ಚೌದರಿ ನಡೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತರು ಉರಿ ಉಗ್ರ ದಾಳಿ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಭೀತಿಯಲ್ಲಿ ಭಾರತೀಯ ಪತ್ರಕರ್ತರನ್ನು ಸುದ್ದಿಗೋಷ್ಠಿಯಿಂದ ಹೊರಗಿಡಲಾಗಿದೆ ಎಂದು ಹೇಳಾಗುತ್ತಿದೆ.