ಪ್ರಧಾನ ಸುದ್ದಿ

ಸಿಬಿಐ ತನಿಖೆ ಆದೇಶಿಸುವವರಿಗೆ ಮೃತ ದೇಹ ಸ್ವೀಕರಿಸುವುದಿಲ್ಲ: ರಾಮಕುಮಾರ್ ಕುಟುಂಬ

Guruprasad Narayana
ಕಡಲೂರ್: ಇನ್ಫೋಸಿಸ್ ಟೆಕ್ಕಿ ಸ್ವಾತಿ ಕೊಲೆ ಆರೋಪಿ ರಾಮಕುಮಾರ್ ಪುಝಲ್ ಕೇಂದ್ರ ಖಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪದ ನಡುವೆ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು ಎಂಬ ಮನವಿಯನ್ನು ಒಬ್ಬ ನ್ಯಾಯಾಧೀಶರ ಮದ್ರಾಸ್ ಹೈಕೋರ್ಟ್ ಪೀಠ ತಿರಸ್ಕರಿಸಿರುವ ಹಿನ್ನಲೆಯಲ್ಲಿ, ಈ ಪ್ರಕರಣ ಸಿಬಿಐ ತನಿಖೆಗೆ ನೀಡದೆ ಹೋದರೆ ಮಗನ ಮೃತ ದೇಹವನ್ನು ಸ್ವೀಕರಿಸುವುದಿಲ್ಲ ಎಂದು ಪರಮಶಿವಂ ಪಟ್ಟುಹಿಡಿದಿದ್ದಾರೆ.
ಚೆನ್ನೈಗೆ ತೆರಳುವ ಸಮಯದಲ್ಲಿ ವಿಸಿಕೆ ಅಧ್ಯಕ್ಷ ತೋಲ್ ತಿರುಮವಲವನ್ ಅವರನ್ನು ಭೇಟಿ ಮಾಡಿದ ಪರಮಶಿವಂ ನಂತರ ವರದಿಗಾರರೊಂದಿಗೆ ಮಾತನಾಡಿ "ನನ್ನ ಮಗನ ಸಾವಿನ ಬಗ್ಗೆ ನಮಗೆ ಸಂಶಯಗಳಿವೆ. ಜೈಲಿನ ಅಧಿಕಾರಿಗಳು ಮತ್ತು ಪೊಲೀಸರು ನೀಡಿರುವ ಮಾಹಿತಿಗಳು ಒಂದಕ್ಕೊಂದು ಪೂರಕವಾಗಿಲ್ಲ. ಆದುದರಿಂದ ರಾಮಕುಮಾರ್ ಅವರ ಸಾವಿನ ಪ್ರಕರಣ ಮತ್ತು ಸ್ವಾತಿ ಕೊಲೆ ಪ್ರಕರಣ ಎರಡನ್ನು ಸಿಬಿಐ ವಶಕ್ಕೆ ನೀಡಬೇಕು" ಎಂದಿರುವ ಪರಮಶಿವಂ, ಹಾಗೆಯೇ ಮರಣೋತ್ತರ ಪರೀಕ್ಷೆ ನಮ್ಮ ವಕೀಲರ ಸಮ್ಮುಖದಲ್ಲಿ ನಡೆಸಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ. 
ಈ ಆತ್ಮಹತ್ಯೆ ಹಲವು ಸಂಶಯಗಳನ್ನು ಮೂಡಿಸಿದೆ ಎಂದಿರುವ ತಿರುಮವಲವನ್ "ರಾಮಕುಮಾರ್ ಅವರ ಸುರಕ್ಷತೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ ಏಕೆ? ಅವರು ಜಾಮಿನನ ಮೇಲೆ ಶೀಘ್ರವಾಗಿ ಬಿಡುಗೆಯಾಗುವವರಿದ್ದರು ಆತ್ಮಹತ್ಯೆ ಏಕೆ ಮಾಡಿಕೊಳ್ಳಬೇಕು? ರಾಮಕುಮಾರ್ ಸಾವಿನಿಂದ ಸ್ವಾತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಇದು. ಅವರು 80 ದಿನ ಜೈಲಿನಲ್ಲಿದ್ದರು, ಅವರು ಹೊರಗೆ ಬಂದಿದ್ದರೆ ಹಲವು ಸತ್ಯಾಂಶಗಳು ಹೊರಗೆ ಬರುತ್ತಿದ್ದವು" ಎಂದಿದ್ದಾರೆ. 
"ಈ ಪ್ರಕರಣ ಸಿಬಿಐ ತನಿಖೆಗೆ ನೀಡುವವರೆಗೂ ಮೃತದೇಹವನ್ನು ಪಡೆಯುವುದಿಲ್ಲ ಎಬ ರಾಮಕುಮಾರ್ ಅವರ ತಂದೆಯ ನಿಲುವಿಗೆ ನಮ್ಮ ಸಹಮತವಿದೆ" ಎಂದು ವಿಸಿಕೆ ಮುಖಂಡ ಹೇಳಿದ್ದಾರೆ. 
ಈ ಪ್ರಕರಣದ ಬಗ್ಗೆ ಗಮನ ಹರಿಸುವಂತೆ ರಾಷ್ಟ್ರಿಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೂ ತಿರುಮವಲವನ್ ಕೋರಿದ್ದಾರೆ. 
SCROLL FOR NEXT