ಪ್ರಧಾನ ಸುದ್ದಿ

ಕೇರಳದ ಪೊಲೀಸ್ ವಶದಲ್ಲಿ ದಲಿತ ಯುವಕನಿಗೆ ಕಿರುಕುಳ ಆರೋಪ; ತನಿಖೆಗೆ ಆದೇಶ

Guruprasad Narayana
ಕೊಚ್ಚಿ: ಕೇರಳದಲ್ಲಿ ಪೋಲೀಸರ ಬಂಧನದಲ್ಲಿ ನಡೆದಿರುವ ಮತ್ತೊಂದು ದೌರ್ಜನ್ಯದ ಘಟನೆಯಲ್ಲಿ, ಸೂರಜ್ ಎಂಬ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ತಂದೆ ಮತ್ತು ತಂದೆಯ ಸೋದರನ ನಡುವಿನ ಕಾದಾಟವನ್ನು ಪೊಲೀಸರಿಗೆ ದೂರು ನೀಡಲು ಹೋದ ಸೂರಜ್, ಪೊಲೀಸರಿಂದಲೇ ಏಟು ತಿಂದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿದ್ದಾರೆ. 
ವೈದ್ಯಕೀಯ ಕಾಲೇಜು ನೀಡಿರುವ ಮಾಹಿತಿಯ ಪ್ರಕಾರ ವೆನ್ನಲಾ ಗ್ರಾಮದ ನಿವಾಸಿ ಸುರೇಂದ್ರನ್ ಎಂಬುವವರ ಪುತ್ರ ಸೂರಜ್ ಭಾನುವಾರ ಸಂಜೆ ತೀವ್ರ ಮೈಕೈ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ನೆರೆದಿದ್ದ ಯುವಕನ ಕುಟುಂಬ, ಸೂರಜ್ ಮೇಲೆ ಪಲರಿವತ್ತೋಮ್ ಪೊಲೀಸ್ ಠಾಣೆಯ ಪೊಲೀಸರು ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. 
"ಅವನು ಪೊಲೀಸ್ ಠಾಣೆಗೆ ಬಂದಾಕ್ಷಣ, ಪೊಲೀಸರು ಅವನನ್ನು ಥಳಿಸಿದ್ದಾರೆ. ಮದ್ಯಪಾನ ಸೇವಿಸಿ ಸೂರಜ್ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ ಮತ್ತು ಮದ್ಯಪಾನ ಅಂಗಡಿಯ ಮುಂದೆ ಪೊಲೀಸರು ಗಸ್ತು ನಡೆಸುವಾಗ ಅವನು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಎಂದು ಆರೋಪಿಸಿ ಪೊಲೀಸರು ಥಳಿಸಿದ್ದಾರೆ" ಎಂದು ಸೂರಜ್ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ. 
ನಂತರ ಸೂರಜ್ ಸಂಬಂಧಿಗಳಿಗೆ ಪೊಲೀಸ್ ಠಾಣೆಗೆ ಬರಹೇಳಿ, ಸೂರಜ್ ಮದ್ಯಪಾನ ಸೇವಿಸಿದ್ದಾನೋ ಇಲ್ಲವೋ ಎಂಬುದನ್ನು ಧೃಢೀಕರಿಸಲು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ. 
ಆದರೆ ಸೋಮವಾರ ಬೆಳಗ್ಗೆ ವೇಳೆಗೆ ಸೂರಜ್ ನ ದೇಹದ ವಿವಿಧ ಬಾಗಗಳು ಊದಿಕೊಂಡಿದ್ದು ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನದಲ್ಲಿ ಕಿರುಕುಳ ಕೊಟ್ಟಿರುವುದನ್ನು ನಿರಾಕರಿಸಿರುವ ಪೊಲೀಸರು ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದ ಆರೋಪವನ್ನು ಸೂರಜ್ ಮೇಲೆ ಹೊರಿಸಿದ್ದಾರೆ. 
ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿರುವ ಉಪ ಪೊಲೀಸ್ ಆಯುಕ್ತ ಅರುಳ್ ಆರ್ ಬಿ ಕೃಷ್ಣನ್, ಅಂದು ಪೊಲೀಸ್ ಠಾಣೆಯಲ್ಲಿದ್ದ ಪೋಲೀಸರ ಹೇಳಿಕೆ ದಾಖಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. 
"ಲಾಕಪ್ ದೌರ್ಜನ್ಯವನ್ನು ಧೃಢೀಕರಿಸುವುದಕ್ಕೂ ಮೊದಲು ನಾವು ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕಿದೆ. ಈ ತನಿಖೆಯಲ್ಲಿ ಅಧಿಕಾರಿಗಳು ತಪ್ಪಿತಸ್ಥರು ಎಂದು ತಿಳಿದುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಕೂಡ ಅವರು ಹೇಳಿದ್ದಾರೆ.
SCROLL FOR NEXT