ಪ್ರಧಾನ ಸುದ್ದಿ

ನನ್ನ ಕೇಸರಿ ಉಡುಪಿನಿಂದಾಗಿ ಕೆಲವರಿಗೆ ತಪ್ಪು ಗ್ರಹಿಕೆಯಿದೆ: ಯೋಗಿ ಆದಿತ್ಯನಾಥ್

Sumana Upadhyaya
ಲಕ್ನೋ: ತಮ್ಮ ಕೇಸರಿ ಉಡುಪಿನಿಂದಾಗಿ ತಮ್ಮ ಬಗ್ಗೆ ಕೆಲವರಿಗೆ ತಪ್ಪು ಗ್ರಹಿಕೆ ಉಂಟಾಗಿದ್ದು, ಸಂತೋಷ ಮತ್ತು ಸಮೃದ್ಧಿಯನ್ನು ಹರಡಿ ರಾಜ್ಯದ ಎಲ್ಲಾ ವರ್ಗದ ಜನರ ಮನಸ್ಸನ್ನು ಗೆಲ್ಲುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
ಕೋಮುವಾದದ ಹೆಸರಿನಲ್ಲಿ ಭಾರತದ ಸಂಪ್ರದಾಯವನ್ನು ಅಪಮಾನ ಮಾಡಲು ಯತ್ನಿಸುವವರು ತಾವು ಅಧಿಕಾರ ವಹಿಸಿಕೊಂಡ ನಂತರ ಭೀತಿ ಎದುರಿಸುತ್ತಿದ್ದಾರೆ ಎಂದರು.
ಹಲವು ತಪ್ಪು ಗ್ರಹಿಕೆಗಳು ತಮ್ಮ ಬಗ್ಗೆ ಇದೆ. ಹಲವರು ನಾನು ಕೇಸರಿ ಹೊದಿಕೆಯ ವ್ಯಕ್ತಿ ಎನ್ನುತ್ತಾರೆ. ಈ ದೇಶದಲ್ಲಿ ಹಲವು ಮಂದಿ ಕೇಸರಿಯನ್ನು ವಿರೋಧಿಸುವವರು ಇದ್ದಾರೆ ಎಂದು ಯೋಗಿ ಆದಿತ್ಯನಾಥ್ ಆರ್ ಎಸ್ಎಸ್ ನೇತೃತ್ವದ ವಾರ ಪತ್ರಿಕೆ ಆರ್ಗನೈಸರ್ ಗೆ ನೀಡಿದ ಸಂದರ್ಶನಲ್ಲಿ ಹೇಳಿದರು.
ಕೋಮುವಾದದ ಹೆಸರಿನಲ್ಲಿ ಭಾರತದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಅಪಮಾನ ಮಾಡಲು ಯತ್ನಿಸುವವರು ತಾವು ಅಧಿಕಾರ ವಹಿಸಿಕೊಂಡ ಮೇಲೆ  ಭೀತಿಯುಂಟಾಗಿದೆ. ನಮ್ಮ ಕೆಲಸದ ಶೈಲಿಯಿಂದ ಸಮಾಜದ ಎಲ್ಲಾ ವರ್ಗದವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ನಾವು ಸಂತೋಷ ಮತ್ತು ಸಮೃದ್ದಿಯ ಹೊಸ ನುಡಿಗಟ್ಟನ್ನು ಹರಡುತ್ತೇವೆ ಎಂದು ಹೇಳಿದರು.
ತಮಗೆ ಅಧಿಕಾರವೆಂದರೆ ಜವಾಬ್ದಾರಿಯೆಂದರ್ಥ. ಉನ್ನತ ಅಧಿಕಾರ ಮತ್ತು ಹುದ್ದೆಗಳಲ್ಲಿರಲು ರಾಜಕೀಯಕ್ಕೆ ನಾವು ಸೇರಿಲ್ಲ. ದೇಶ ರಕ್ಷಣೆ ತಮ್ಮ ಸರ್ಕಾರದ ಪ್ರಮುಖ ಧರ್ಮವಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ತಮ್ಮ ಸರ್ಕಾರದ ಆದ್ಯತೆಯಾಗಿದ್ದು ಗೂಂಡಾರಾಜ್ ಸಂಸ್ಕೃತಿಯಿಂದ ಮುಕ್ತಿ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ  ಯೋಜನೆಗಳನ್ನು ತಯಾರಿಸಲಾಗುತ್ತಿದ್ದು ಮುಂದಿನ ಎರಡು ತಿಂಗಳಿನಲ್ಲಿ ಅದರ ಪರಿಣಾಮ ಕಾಣಲಿದೆ ಎಂದರು.
ರಾಜ್ಯದಿಂದ ವಲಸೆ ಹೋಗುವ ಜನರನ್ನು ಪರೀಕ್ಷಿಸಲು ಹೊಸ ಕೈಗಾರಿಕಾ ನೀತಿಯನ್ನು ತರಲಾಗುವುದು ಎಂದರು.
SCROLL FOR NEXT