ಫಿರೋಜ್ ಪುರ್: ಪಂಜಾಬ್ ನ ಫಿರೋಜ್ ಪುರ್ ಸೆಕ್ಟರ್ ಬಳಿ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಜೊತೆಗೆ ಗುಂಡಿನ ಚಕಮಕಿ ನಡೆಸಿದ ಗಡಿ ಭದ್ರತಾ ಪಡೆ ಕನಿಷ್ಠ ೧೫ ಕೆಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಶಪಡಿಕೊಳ್ಳಲಾದ ಹೆರಾಯಿನ್ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ೭೫ ಕೋಟಿ ರೂ ಎನ್ನಲಾಗಿದೆ.
ಮಾದಕವಸ್ತು ನಿಯಂತ್ರಣ ಬಯೋರೋದಿಂದ (ಎನ್ ಸಿ ಬಿ) ಮಾಹಿತಿ ಪಡೆದ ಬಿ ಎಸ್ ಎಫ್, ನಿಖರವಾದ ಪ್ರದೇಶದಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. "ಅಂತಾರಾಷ್ಟ್ರೀಯ ಗಡಿಯಲ್ಲಿ ಹೆರಾಯಿನ್ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂದು ಖಚಿತ ಸುಳಿವು ಸಿಕ್ಕ ನಂತರ ಖಾರ್ಲ ಪೋಸ್ಟ್ ಟ್ರೂಪರ್ಸ್ ಈ ಕಾರ್ಯಾಚರಣೆ ನಡೆಸಿದ್ದಾರೆ" ಎಂದು ಬಿ ಎಸ್ ಎಫ್ ವಕ್ತಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು ಮಧ್ಯರಾತ್ರಿ ೨:೩೦ ಸಂಶಯಾತ್ಮಕ ಚಲನವಲನಗಳು ಕಂಡುಬಂದವು. ನಂತರ ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರು ಕೆಲವು ಪೊಟ್ಟಣಗಳನ್ನು ಎಸೆಯಲು ಪ್ರಾರಂಭಿಸಿದರು.
"ನಮ್ಮ ಪಡೆಗಳು ಅವರಿಗೆ ಸವಾಲೆಸೆದಾಗ, ಅವರು ನಮ್ಮತ್ತ ಗುಂಡು ಹಾರಿಸಿದರು. ಬಿ ಎಸ್ ಎಫ್ ಜವಾನರು ಕೂಡ ಸ್ವರಕ್ಷಣೆಗೆ ಪ್ರತಿ ಗುಂಡಿನ ದಾಳಿ ನಡೆಸಬೇಕಾಯಿತು" ಎಂದು ಅವರು ಹೇಳಿದ್ದಾರೆ.
ಗೋಧಿ ಗದ್ದೆಯ ಕತ್ತಲಿನಲ್ಲಿ ಈ ಕಳ್ಳ ಸಾಗಾಣಿಕೆದಾರರು ತಪ್ಪಿಸಿಕೊಂಡರು ಎಂದು ಕೂಡ ಅವರು ಹೇಳಿದ್ದಾರೆ. ನಂತರ ಬಿ ಎಸ್ ಎಫ್ ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಹೆರಾಯಿನ್ ಇದ್ದ ೧೫ ಪೊಟ್ಟಣಗಳನ್ನು ವಶಪಡಿಸಿಕೊಂಡಿದೆ.