ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಅಲ್ವಾರ್ ನಲ್ಲಿ ಗೋರಕ್ಷಕ ದಳದವರು ಒಬ್ಬ ವ್ಯಕ್ತಿಯನ್ನು ಥಳಿಸಿ ಹತ್ಯೆಗೈರುವ ಘಟನೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದು "ಸರ್ಕಾರ ತನ್ನ ಜವಾಬ್ದಾರಿಗಳನ್ನು ತೊರೆದು, ಗುಂಪುಗಳಿಗೆ ಥಳಿಸಿ ಕೊಲೆಮಾಡಲು ಅವಕಾಶ ನೀಡಿದರೆ, ಇಂತಹ ದುರ್ಘಟನೆಗಳು ಸಂಭವಿಸುತ್ತವೆ" ಎಂದಿದ್ದಾರೆ.
ಅಲ್ವಾರ್ ನಲ್ಲಿ ಕಾನೂನು ವ್ಯವಸ್ಥೆಯನ್ನು ಮುರಿದಿರುವುದು ಆಘಾತ ತಂದಿದೆ ಎಂದಿರುವ ಅವರು, ಇದರ ಕಾರಣಕರ್ತರ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
"ಸರ್ಕಾರ ತನ್ನ ಜವಾಬ್ದಾರಿಗಳನ್ನು ತೊರೆದು ಮತ್ತು ಕೊಲೆಗಡುಕ ಗುಂಪುಗಳನ್ನು ಆಳಲು ಅವಕಾಶ ಕೊಟ್ಟರೆ ಇಂತಹ ದುರಂತಗಳು ಸಂಭವಿಸುತ್ತವೆ. ಕಾನೂನು ವ್ಯವಸ್ಥೆಯನ್ನು ಮುರಿದಿರುವುದು ಆಘಾತ ತಂದಿದೆ" ಎಂದು ಗಾಂಧಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.
"ಸರಿದಾರಿಯಲ್ಲಿ ಚಿಂತಿಸುವ ಎಲ್ಲ ಭಾರತೀಯರು ಈ ಕುರುಡು ದೌರ್ಜನ್ಯವನ್ನು ಖಂಡಿಸಬೇಕು. ಈ ಕ್ರೂರ ಮತ್ತು ಹೊಣೆಗೇಡಿ ದಾಳಿಯ ಕಾರಣಕರ್ತರ ಮೇಲೆ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳುವುದನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಕೂಡ ರಾಹುಲ್ ಹೇಳಿದ್ದಾರೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗೋರಕ್ಷಕ ದಳದವರು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.