ಪ್ರಧಾನ ಸುದ್ದಿ

ಭೇಟಿಗೆ ಮೋದಿ ನಕಾರ, ಪ್ರಧಾನಿ ಕಚೇರಿ ಬಳಿ ತಮಿಳುನಾಡು ರೈತರಿಂದ ಬೆತ್ತಲೆ ಪ್ರತಿಭಟನೆ!

Lingaraj Badiger
ನವದೆಹಲಿ: ರೈತರ ಆತ್ಮಹತ್ಯೆ ಖಂಡಿಸಿ ಹಾಗೂ ಬರ ಪರಿಹಾರಕ್ಕೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರೈತರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ನೀಡಿಲ್ಲವೆಂದು ರಸ್ತೆಯಲ್ಲೇ ಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಏಳು ಮಂದಿಯ ನಿಯೋಗವೊಂದು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮನವಿ ಮಾಡಲು ಮುಂದಾಗಿದ್ದಾರೆ. ಆದರೆ ಪ್ರಧಾನಿ ಭೇಟಿಗೆ ಅವಕಾಶ ನೀಡಿಲ್ಲ. ಹೀಗಾಗಿ ಪ್ರಧಾನಿ ಕಚೇರಿ ಸಿಬ್ಬಂದಿ ಕೈಗೆ ಮನವಿ ಪತ್ರ ನೀಡಿ, ವಾಪಸ್ ಪೊಲೀಸ್ ಜೀಪ್ ನಲ್ಲಿ ಬರುತ್ತಿದ್ದ ವೇಳೆ ಓರ್ವ ರೈತ ಜೀಪ್ ನಿಂದ ಜಿಗಿದು ರಸ್ತೆಯಲ್ಲೇ ನಗ್ನವಾಗಿದ್ದಾನೆ. ಅದನ್ನು ಮತ್ತೆ ಇಬ್ಬರು ರೈತರು ಜೀಪ್ ಜಿಗಿದು ರಸ್ತೆಯಲ್ಲಿ ಬೆತ್ತಲೆಯಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಓಡುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಬೆತ್ತಲೆಯಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಬಂಧಿತ ರೈತ ಅಯ್ಯಕಣ್ಣು ಪ್ರಧಾನಿ ಮೋದಿ ಅವರು ನಮ್ಮ ಭೇಟಿಗೆ ನಿರಾಕರಿಸಿದ್ದರು. ಹಾಗಾಗಿ ನಾವು ಯಾಕೆ ಹೀಗೆ ಮಾಡಬೇಕಾಯಿತು. ನಮ್ಮ ರಾಜ್ಯದ ರೈತರ ದುಸ್ಥಿತಿ ಕೇಳೋರಾರು ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ 40 ಸಾವಿರ ಕೋಟಿ ರುಪಾಯಿ ಬರಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಮಿಳುನಾಡು ರೈತರು ಕಳೆದ 28 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
SCROLL FOR NEXT