ಚೆನ್ನೈ: ರೈತರ ಆತ್ಮಹತ್ಯೆ ಖಂಡಿಸಿ ಹಾಗೂ ಸಾಲ ಮನ್ನಾಗೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರೈತರ ಬೆಂಬಲಕ್ಕೆ ಧಾವಿಸಿರುವ ಐಐಟಿ ಮದ್ರಾಸ್ ವಿದ್ಯಾರ್ಥಿಗಳ ತಂಡವೊಂದು ಶನಿವಾರದಿಂದ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಹಲವು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಅವರಿಗೆ ಇತರೆ ಐಐಟಿಗಳ ವಿದ್ಯಾರ್ಥಿಗಳು ಸಾಥ್ ನೀಡುವ ಸಾಧ್ಯತೆ ಇದೆ.
ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ತಮಿಳುನಾಡು ರೈತರಿಗೆ ಬೆಂಬಲ ಸೂಚಿಸುವುದಾಗಿ ನಾವು ಇಂದಿನ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದು ವಿದ್ಯಾರ್ಥಿ ನಾಯಕ ಸುಂದರ್ ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ನಿರಾಕರಿಸಿದ್ದಕ್ಕಾಗಿ ತಮಿಳುನಾಡು ರಸ್ತೆಯಲ್ಲೇ ಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು.