ನವದೆಹಲಿ: ಮುಸ್ಲಿಂ ಮಹಿಳೆಯರ ಪಾಲಿಗೆ ದೊಡ್ಡ ಪಿಡುಗಾಗಿ ಮಾರ್ಪಟ್ಟಿರುವ ತ್ರಿವಳಿ ತಲ್ಲಾಖ್ ಅನ್ನು ತಳಮಟ್ಟದಿಂದ ಪರಿಷ್ಕರಿಸ ಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯ ಸಿಗಲೇಬೇಕಿದೆ. ನಾವು ಜಿಲ್ಲಾ ಮಟ್ಟದಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ನವಭಾರತ ನಿರ್ಮಾಣಕ್ಕೆ ನಮ್ಮ ಮುಂದಿನ ಹೆಜ್ಜೆಗಳನ್ನು ವೇಗವಾಗಿ ಇಡಬೇಕಿದ್ದು, ಹಿಂದುಳಿದ ಮುಸ್ಲಿಂ ಮಹಿಳೆಯರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಮೋದಿ ಕರೆ ನೀಡಿದ್ದಾರೆ.
ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ಸರ್ಕಾರದ ಕಾನೂನಿನಲ್ಲಿ ಕೆಲ ಸೆಕ್ಷನ್ ಗಳಿದ್ದು, ಈ ಬಗ್ಗೆಯೂ ಕೂಡ ಅಮೂಲಾಗ್ರ ಚರ್ಚೆ ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇನ್ನು ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತ್ರಿವಳಿ ತಲ್ಲಾಖ್ ಬಗ್ಗೆ ಕಠಿಣ ನಿಲುವು ತಳೆದಿದ್ದು, ಸೂಕ್ತ ಕಾರಣಗಳನ್ನು ನೀಡದೇ ತಲ್ಲಾಖ್ ನೀಡಿದರೆ ಅಂತಹವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.