ಪ್ರಧಾನ ಸುದ್ದಿ

ಬಿಬಿಎಂಪಿ ಅಧಿಕಾರಿಗಳಿಗೆ ಎನ್ ಜಿಟಿ ಸಮನ್ಸ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವ ಎಚ್ಚರಿಕೆ

Lingaraj Badiger
ನವದೆಹಲಿ: ಬೆಳ್ಳಂದೂರು ಕೆರೆ ನೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದು, ನ್ಯಾಯಾಧೀಕರಣವನ್ನು ನಿಂದಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಬೆಳ್ಳಂದರೂರು ಕೆರೆ ಬೆಂಕಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ಪೀಠ, ಬಿಬಿಎಂಪಿ ಸಲ್ಲಿಸಿರುವ ವಿವಾದಾತ್ಮಕ ಅಫಿಡವಿಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಕಾರಣರಾದ ಅಧಿಕಾರಿಗಳು ಕೂಡಲೇ ನ್ಯಾಯಾಲಯದ ಮುಂದೆ ಹಾಜರಾಗಬೇಕು, ಇಲ್ಲವೆ ಜೈಲಿಗೆ ಹೋಗಲು ಸಿದ್ದರಾಗಬೇಕು ಎಂದು ಎಚ್ಚರಿಕೆ ನೀಡಿದೆ.
ಹಸಿರು ನ್ಯಾಯಪೀಠ(ಎನ್‍ಜಿಟಿ) ಅರೆನ್ಯಾಯಾಂಗ ಸಂಸ್ಥೆ ಎಂದು ಬಿಬಿಎಂಪಿ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ಉಲ್ಲೇಖ ಮಾಡಿರುವುದನ್ನು ಇಂದಿನ ವಿಚಾರಣೆಯಲ್ಲಿ ಗಮನಿಸಿದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ತೀವ್ರ ಕೆಂಡಾಮಂಡಲರಾದರು.
ಒಂದು ನ್ಯಾಯಾಂಗ ಸಂಸ್ಥೆಯನ್ನು ಈ ರೀತಿ ಅವಹೇಳನ ಮಾಡುವಂತಹ ಅಫಿಡೆವಿಟ್ ಸಿದ್ಧಪಡಿಸಿರುವ ಅಧಿಕಾರಿಗಳು ಯಾರು? ಅವರು ನಾಳೆ ಖುದ್ದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಬೇಕೆಂದು ಆದೇಶಿಸಿದರು. 
ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಬೆಂಕಿ ಬಿದ್ದು ದಟ್ಟ ಹೊಗೆ ಆವರಿಸಿ ಪರಿಸರ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಹಸಿರು ನ್ಯಾಯಾಧಿಕರಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ಸ್ವಯಂ ಸೇವಾ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಮಂಡಳಿ ಹಾಗೂ ಬಿಬಿಎಂಪಿ ಬೆಳ್ಳಂದೂರು ಕೆರೆ ರಕ್ಷಣೆ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಅಫಿಡೆವಿಟ್ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಎನ್‍ಜಿಟಿಯನ್ನು ಅರೆನ್ಯಾಯಾಂಗ ಸಂಸ್ಥೆ ಎಂದು ಉಲ್ಲೇಖಿಸಿದ್ದರು. ಅಲ್ಲದೆ, ಈ ಸಂಸ್ಥೆ ನೀಡುವ ಎಲ್ಲಾ ಆದೇಶಗಳನ್ನು ಪಾಲನೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು.
SCROLL FOR NEXT