ಗಾಯಾಳು ಯೋಧರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು
ಚೆನ್ನೈ: ನಿನ್ನೆ ಮಧ್ಯಾಹ್ನ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಮಾವೋವಾದಿ ನಕ್ಸಲರು ದಾಳಿ ನಡೆಸಿದ ವೇಳೆ ಸಿಆರ್ ಪಿಎಫ್ ಯೋಧರು ಊಟ ಮಾಡುತ್ತಿದ್ದರು ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 12.30ರ ಸುಮಾರಿಗೆ ಸಿಆರ್ ಪಿಎಫ್ ನ ಕೆಲವು ಯೋಧರು ಶಸ್ತ್ರಾಸ್ತ್ರಗಳನ್ನು ಬಿಟ್ಟು ಊಟಕ್ಕೆ ಕುಳಿತ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ನಕ್ಸಲರ ತಂಡ, ಯೋಧರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಗುಪ್ತಚರ ಇಲಾಖೆಯ ವೈಫಲ್ಯವೇ ಈ ದಾಳಿಗೆ ಕಾರಣ ಎನ್ನಲಾಗುತ್ತಿದ್ದು. ರಸ್ತೆ ಕಾಮಗಾರಿಗೆ 100 ಸಿಆರ್ ಪಿಎಫ್ ಯೋಧರನ್ನು ನಿಯೋಜಿಸಲಾಗಿತ್ತಾದರೂ ತಮ್ಮದೇ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಸಂಖ್ಯೆಯ ನಕ್ಸಲರು ದಾಳಿಗಾಗಿ ಕಾದಿರುವ ವಿಚಾರ ಯೋಧರಿಗೆ ತಿಳಿಯದೇ ಹೋಗಿತ್ತು. ಕೇವಲ 1-2 ಕಿ.ಮೀ ವ್ಯಾಪ್ತಿಯಲ್ಲಿ ಬರೊಬ್ಬರಿ 300 ನಕ್ಸಲರು ಅವಿತಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇರುವುದು ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಚಿತಗುಫಾದಿಂದ ಸುಕ್ಮಾಗೆ ಸಂಪರ್ಕಿಸುವ ಸುಮಾರು 5.5 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ 25 ಯೋಧರು ಹುತಾತ್ಮರಾಗಿದ್ದು. ಏಳು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.