ರಾಜ್ಯಪಾಲರ ಭೇಟಿಗೆ ತೆರಳುತ್ತಿರುವ ಶಶಿಕಲಾ
ಚೆನ್ನೈ: ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಚಟುವಟಿಕೆ ರಾಜಭವನಕ್ಕೆ ಸ್ಥಳಾಂತರಗೊಂಡಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರು ಗುರುವಾರ ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.
ಇಂದು ಸಂಜೆ 7ಗಂಟೆಯ ಸುಮಾರಿಗೆ ತಮ್ಮ 9 ಬೆಂಬಲಿಗ ಸಚಿವ ಹಾಗೂ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಶಶಿಕಲಾ ಅವರು, ತಮಗೆ 129 ಶಾಸಕರ ಬೆಂಬಲವಿರುವ ಪಟ್ಟಿಯನ್ನು ನೀಡಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ಎಐಎಡಿಎಂಕೆ ಶಾಸಕಾಂಗ ಪಕ್ಷದಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಸಹ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.
ಇದೇವೇಳೆ ತಮ್ಮ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ತಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಹೀಗಾಗಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಶಶಿಕಲಾ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ.
ಇದಕ್ಕು ಮುನ್ನ ಶಶಿಕಲಾ ಅವರು ಚೆನ್ನೈನ ಮರೀನಾ ಬೀಚ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಅಮ್ಮನ ಆರ್ಶೀವಾದ ಪಡೆದರು. ಬಳಿಕ ನೇರವಾಗಿ ರಾಜಭವನಕ್ಕೆ ಆಗಮಿಸಿದರು.