ಪ್ರಧಾನ ಸುದ್ದಿ

ಕಾಲಾವಕಾಶ ಇಲ್ಲ; ಕೂಡಲೇ ಶರಣಾಗಿ: ಶಶಿಕಲಾಗೆ "ಸುಪ್ರೀಂ" ಛಾಟಿ

Srinivasamurthy VN

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ಶರಣಾಗತಿಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್  ಬುಧವಾರ ಹೇಳಿದೆ.

ಶಶಿಕಲಾ ಪರ ಹಿರಿಯ ವಕೀಲ ಕೆಟಿಎಸ್ ತುಳಸೀ ದಾಸ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಇಂದು ಬೆಳಗ್ಗೆ ಅರ್ಜಿ ಸಲ್ಲಿಸಿದ್ದು, ಆದರೆ ಸುಪ್ರೀಂ ಕೋರ್ಟ್ ಶರಣಾಗತಿಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು  ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅನಿವಾರ್ಯವಾಗಿ ಇಂದು ಶಶಿಕಲಾ ಬೆಂಗಳೂರಿಗೆ ಆಗಮಿಸಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ವಿಶೇಷ ಕೋರ್ಟ್ ಗೆ ಶರಣಾಗ ಬೇಕಿದೆ.

ಇನ್ನು ಎಐಎಡಿಎಂಕೆಯಲ್ಲಿ ಉಂಟಾಗಿರುವ ಭಿನ್ನಮತ ಮತ್ತು ಪನ್ನೀರ್ ಸೆಲ್ವಂ ಬಣ ಯಾವುದೇ ಕಾರಣಕ್ಕೂ ಮೇಲುಗೈ ಸಾಧಿಸಬಾರದು ಎಂಬ ಕಾರಣಕ್ಕೆ ಶಶಿಕಲಾ ಮತ್ತು ಅವರ ಬೆಂಬಲಿತ ಶಾಸಕರು ಶತಾಯಗತಾಯ ಸರ್ಕಾರ  ರಚನೆ ಮಾಡಲೇಬೇಕು ಎಂದು ನಿರ್ಧರಿಸಿದ್ದು, ಇದೇ ಕಾರಣಕ್ಕೆ ನಿನ್ನೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ತರಾತುರಿಯಲ್ಲಿ ಶಾಸಕರು ತಂಗಿದ್ದ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ಸಭೆ ನಡೆಸಲಾಗಿತ್ತು. ಅಂತೆಯೇ ಶಶಿಕಲಾ ಅವರ ಆಪ್ತ  ಎಡಪಾಡಿ ಕೆ ಪಳನಿ ಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಬಳಿ ಮನವಿ ಕೂಡ  ಸಲ್ಲಿಸಲಾಗಿದೆ.

ಇದೇ ಕಾರಣಕ್ಕೆ ಶಶಿಕಲಾ ಶರಣಾಗತಿಗೆ ಕಾಲಾವಕಾಶ ಕೇಳಿದ್ದು, ತಮ್ಮ ಬೆಂಬಲಿಗರನ್ನೇ ಸಿಎಂ ಕುರ್ಚಿಯಲ್ಲಿ ಕೂರಿಸುವ ಮೂಲಕ ತಮಿಳುನಾಡು ಸರ್ಕಾರವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು ಎನ್ನುವುದು ಶಶಿಕಲಾ  ಆಲೋಚನೆಯಾಗಿದೆ.

SCROLL FOR NEXT