ಪ್ರಧಾನ ಸುದ್ದಿ

ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಕುಟುಂಬದ ಉಚ್ಛಾಟನೆ!

Srinivasamurthy VN

ಚೆನ್ನೈ: ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟ ಮುಂದುವರೆದಿರುವಂತೆಯೇ ಇತ್ತ ಉಚ್ಛಾಟನಾ ಪರ್ವ ಕೂಡ ಮುಂದುವರೆದಿದೆ. ಈ ಹಿಂದೆ ಶಶಿಕಲಾ ಬಣ ಪನ್ನೀರ್ ಸೆಲ್ವಂ ಮತ್ತು ಅವರ ಬೆಂಬಲಿತ ಸಂಸದ, ಶಾಸಕರನ್ನು  ಉಚ್ಛಾಟಿಸಿದ ಬೆನ್ನಲ್ಲೇ ಪನ್ನೀರ್ ಸೆಲ್ವಂ ಬಣ ಕೂಡ ಇದೀಗ ಶಶಿಕಲಾ ಮತ್ತು ಅವರ ಕುಟುಂಬವನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ ಹಾಗೂ ಇತ್ತೀಚೆಗಷ್ಟೇ ಪನ್ನೀರ್ ಸೆಲ್ವಂ ಬಣದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಇ ಮಧುಸೂಧನ್ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಶಶಿಕಲಾ  ಮತ್ತು ಅವರ ಕುಟುಂಬಸ್ಥರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಶಶಿಕಲಾ ಮತ್ತು ಅವರ ಸಹೋದರರಾದ ಟಿಟಿವಿ ದಿನಕರನ್ ಮತ್ತು ವೆಂಕಟೇಶನ್ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಅನೂರ್ಜಿತಗೊಳಿಸುವ ಮೂಲಕ  ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ಶಶಿಕಲಾ ಅವರ ಸಹೋದರ ಸಂಬಂಧಿ ಕೂಡ ಆಗಿರುವ ಟಿಟಿವಿ ದಿನಕರನ್ ಇತ್ತೀಚೆಗಷ್ಟೇ ಎಐಎಡಿಎಂಕೆ ಪಕ್ಷ ಉಪ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಈ ನೇಮಕವೇ ಕಾನೂನು ಬಾಹಿರ ಎಂದು ಆರೋಪಿಸಿರುವ ಇ  ಮಧುಸೂಧನ್ ಅವರು, ಕನಿಷ್ಟ ಐದು ವರ್ಷಗಳ ಕಾಲ ಪಕ್ಷದ ಸದಸ್ಯತ್ವ ಹೊಂದಿರುವ ಮತ್ತು ಪಕ್ಷಕ್ಕಾಗಿ ದುಡಿದಿರುವ ವ್ಯಕ್ತಿಗೆ ಮಾತ್ರ ಈ ಹುದ್ದೆಯನ್ನು ನೀಡಬಹುದು. ಆದರೆ ದಿನಕರನ್ ಗೆ ಆ ಅರ್ಹತೆ ಇಲ್ಲ. ಹೀಗಾಗಿ ಅವರ ನೇಮಕ  ಅಸಿಂಧು ಎಂದು ಹೇಳಿದ್ದಾರೆ.

ಪನ್ನೀರ್ ಬಣದಿಂದ ಪಳನಿ ಸ್ವಾಮಿ ವಿರುದ್ಧ ಮತ ಚಲಾಯಿಸಲು ನಿರ್ಧಾರ, ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ಧತೆ!
ಅಂತೆಯೇ ಪಕ್ಷದ ಶಾಸಕರ ವಿರೋಧದ ಹೊರತಾಗಿಯೂ ಅಧಿಕಾರಕ್ಕೇರಿರುವ ಪಳನಿ ಸ್ವಾಮಿ ನೇತೃತ್ವದ ನೂತನ ಸರ್ಕಾರದ ವಿರುದ್ಧ ತಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪನ್ನೀರ್ ಸೆಲ್ವಂ ಬಣದ ಶಾಸಕರು  ಘೋಷಿಸಿದ್ದಾರೆ. ಅಂತೆಯೇ ನಾಳೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿ ಸ್ವಾಮಿ ವಿರುದ್ಧ ಮತ ಚಲಾಯಿಸುವ ಮೂಲಕ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿಯೂ ಪನ್ನೀರ್ ಸೆಲ್ವಂ ಬಣ ಘೋಷಣೆ ಮಾಡಿದೆ.

SCROLL FOR NEXT