ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ನಜ್ಯ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಹಾಗೂ ಇತರೆ ಇಬ್ಬರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ಕೇರಳ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.
ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಪಲ್ಸರ್ ಸುನಿ, ಮಣಿಕಂಠನ್ ಹಾಗೂ ವಿ.ಪಿ.ವಿಗೀಶ್ ಅವರು ನಿರೀಕ್ಷಣಾ ಜಾಮೀನು ಕೋರಿ ಇಂದು ಅರ್ಜಿ ಸಲ್ಲಿಸಿದ್ದಾರೆ.
ಈ ಮೂರು ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ 7.30 ರ ಸುಮಾರಿಗೆ ತ್ರಿಶೂರ್ನಿಂದ ಎರ್ನಾರಕುಳಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ನಂತರ ರಾತ್ರಿ ಪರಿವಟ್ಟಲಂ ಎಂಬಲ್ಲಿ ನಟಿಯ ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದರು. ನಂತರ ನಟಿ ನಿರ್ದೇಶಕರೊಬ್ಬ ಮನೆಗೆ ತೆರಳಿ ಅಲ್ಲಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಕಾರು ಚಾಲಕ ಮಾರ್ಟಿನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.