ಪ್ರಧಾನ ಸುದ್ದಿ

ಅಮೆರಿಕಾದಲ್ಲಿ ಭಾರತೀಯ ಎಂಜಿನಿಯರ್ ಹತ್ಯೆ; ಸತ್ಯ ನಾದೆಳ್ಲ ಖಂಡನೆ

Guruprasad Narayana
ನ್ಯೂಯಾರ್ಕ್: 'ಮಧ್ಯ ಪ್ರಾಚ್ಯ ದೇಶದ ನಾಗರಿಕರು' ಎಂದು ತಪ್ಪಾಗಿ ತಿಳಿದು, ನಮ್ಮ ದೇಶ ಬಿಟ್ಟು ತೊಲಗಿ ಎಂದು ಕಿರುಚಿ ಬಾರ್ ಒಂದರಲ್ಲಿ ಗುಂಡಿನ ದಾಳಿ ಮಾಡಿ ಒಬ್ಬ ಭಾರತಿಯನ್ನು ಹತ್ಯೆ ಮಾಡಿದ ಮತ್ತು ಮತ್ತೊಬ್ಬ ಗಾಯಗೊಳಿಸಿದ ಘಟನೆಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಖಂಡಿಸಿದ್ದಾರೆ. 
"ನಮ್ಮ ಸಮಾಜದಲ್ಲಿ ಹಿಂಸೆಗೆ ಮತ್ತು ಕೋಮು ಅಸಹಿಷ್ಣುತೆಗೆ ಜಾಗವಿಲ್ಲ. ಕಾನ್ಸಾಸ್ ನಲ್ಲಿ ನಡೆದ ಈ ಭೀಕರ ದಾಳಿಯ ಸಂತ್ರಸ್ತರಿಗೆ ನಾನು ಮರುಗುತ್ತೇನೆ" ಎಂದು ಭಾರತೀಯ ಮೂಲದ ಸಿಇಒ ಟ್ವೀಟ್ ಮಾಡಿದ್ದಾರೆ. 
ಅಮೆರಿಕಾದ ಕಾನ್ಸಾಸ್ ನ ಓಲಾಥೇಯಲ್ಲಿನ ಬಾರ್ ಒಂದರಲ್ಲಿ ೫೧ ವರ್ಷದ ನೌಕಾದಳದ ಅಧಿಕಾರಿ ಬುಧವಾರ ರಾತ್ರಿ ಗುಂಡು ಹಾರಿಸಿ ೩೨ ವರ್ಷದ ಶ್ರೀನಿವಾಸ್ ಕುಚಿಬೋಟ್ಲ ಅವರನ್ನು ಹತ್ಯೆಗೈದು ೩೨ ವರ್ಷದ ಅಲೋಕ್ ಮದಸಾನಿ ಅವರಿಗೆ ಗಾಯಗೊಳಿಸಿದ್ದಾನೆ. 
ಈ ದಾಳಿಕೋರನನ್ನು ಆ್ಯಡಮ್ ಪುರಿಂಟೋನ್ ಎಂದು ಗುರುತಿಸಲಾಗಿದೆ. ಭಾರತೀಯರನ್ನು ಉಳಿಸಲು ೨೪ ವರ್ಷದ ಇಯಾನ್ ಗ್ರಿಲ್ಲಾತ್ ಎಂಬುವವರು ಮಧ್ಯ ಪ್ರವೇಶಿಸಿದಾಗ ಅವರಿಗೂ ಗಾಯವಾಗಿದೆ. 
ಶ್ರೀನಿವಾಸ್ ಹೈದರಾಬಾದ್ ಮೂಲದವರಾಗಿದ್ದರೆ, ಅಲೋಕ್ ಅವರು ತೆಲಂಗಾಣದ ವಾರಂಗಲ್ ಮೂಲದವರು. ಇವರಿಬ್ಬರು ಗಾರ್ಮಿನ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 
SCROLL FOR NEXT