ಅಮೆರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಹತ್ಯೆಯಾದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕುಚಿಬೊಟ್ಲಾ
ಹೈದರಾಬಾದ್: ಅಮೆರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಹತ್ಯೆಯಾದ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಅವರ ದೇಹವನ್ನು ಸೋಮವಾರ ರಾತ್ರಿ ಹೈದರಾಬಾದ್ ಗೆ ತರಲಾಗುತ್ತಿದೆ.
ಅಮೆರಿಕಾ ಮಾಜಿ ನೌಕಾ ಸಿಬ್ಬಂದಿ ಆಡಮ್ ಡಬ್ಲ್ಯೂ ಪುರೀಂಟನ್ ಅವರು ಹಾರಿಸಿದ ಗುಂಡೇಟಿಗೆ ಬಲಿಯಾದ ಶ್ರೀನಿವಾಸ್ ಅವರ ದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದೆ. ಅಮೆರಿಕಾದ ಕಾನ್ಸಾಸ್ ನಲ್ಲಿ ಫೆಬ್ರವರಿ ೨೨ ರಂದು ನಡೆದ ಈ ಗುಂಡಿನ ದಾಳಿಯಲ್ಲಿ ಶ್ರೀನಿವಾಸ್ ಮೃತಪಟ್ಟಿದ್ದರು ಮತ್ತು ಅಲೋಕ್ ಮದಾಸನಿ ಎಂಬ ಮತ್ತೊಬ್ಬ ಎಂಜಿನಿಯರ್ ಗಾಯಗೊಂಡಿದ್ದರು.
ಏರ್ ಇಂಡಿಯಾ ವಿಮಾನದಲ್ಲಿ ಸೋಮವಾರ ರಾತ್ರಿ ಹೈದರಾಬಾದ ವಿಮಾನನಿಲ್ದಾಣಕ್ಕೆ ದೇಹವನ್ನು ತರುವ ಸಾಧ್ಯತೆಯಿದೆ. ಶ್ರೀನಿವಾಸ್ ಅವರ ಪತ್ನಿ ಸುನನ್ಯ ದುಮಲಾ, ಅವರ ಸಹೋದರ ಮತ್ತಿತರ ಬಂಧುಗಳು ಕೂಡ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಅಂತಿಮ ಸಂಸ್ಕಾರ ಮಂಗಳವಾರ ಜುಬಿಲಿ ಹಿಲ್ಸ್ ನಲ್ಲಿ ನಡೆಯಲಿದೆ ಎಂದು ಕೌಟುಂಬಿಕ ಸದಸ್ಯರು ತಿಳಿಸಿದ್ದಾರೆ.
ನಗರದ ಹೊರವಲಯದ ಬಾಚುಪಳ್ಳಿಯಲ್ಲಿರುವ ಶ್ರೀನಿವಾಸ್ ಅವರ ಮನೆಗೆ ದುಃಖತಪ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಬಂಧುಗಳು, ಗೆಳೆಯರು ಮತ್ತು ವಿವಿಧ ಪಕ್ಷಗಳ ಮುಖಂಡರು ಶ್ರೀನಿವಾಸ್ ಅವರ ಪೋಷಕರು ಮತ್ತು ಹತ್ತಿರದ ಬಂಧುಗಳಿಗೆ ಸಮಾಧಾನ ಹೇಳಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಮತ್ತು ಬಂಡಾರು ದತ್ತಾತ್ರೇಯ ಕೂಡ ಶನಿವಾರ ಶ್ರೀನಿವಾಸ್ ಮನೆಗೆ ಭೇಟಿ ನೀಡಿ ದುಃಖದಲ್ಲಿ ಮುಳುಗಿರುವ ಪೋಷಕರಾದ ಕೆ ಮಧುಸೂಧನ್ ಶಾಸ್ತ್ರಿ ಮತ್ತು ಪರ್ವತ ವರ್ಧಿನಿ ಅವರನ್ನು ಸಂತೈಸಲು ಪ್ರಯತ್ನಿಸಿದ್ದಾರೆ.