ಬಾಲಸೋರ್: ಅಗ್ನಿ 5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಬೆನ್ನಲ್ಲೇ ನಡೆದ ಅಗ್ನಿ 4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಕೂಡ ಯಶಸ್ಸು ಸಾಧಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಷಿಪಣಿ ಭಾರತೀಯ ಸೇನೆ ಸೇರಲಿದೆ ಎಂದು ತಿಳಿದುಬಂದಿದೆ.
ಒಡಿಶಾದ ಬಾಲಸೋರ್ ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ಬ್ಲಾಕ್ ನಲ್ಲಿ ಕ್ಷಿಪಣಿಯನ್ನು ಇಂದು ಬೆಳಗ್ಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಭಾರತೀಯ ಸೇನೆ ಸೋಮವಾರ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಕೇವಲ 20 ನಿಮಿಷದಲ್ಲಿ 800 ಕಿಮೀ ದೂರ ಕ್ರಮಿಸಿ ನಿಖರ ಗುರಿ ತಲುಪುವ ಮೂಲಕ ಅಗ್ನಿ-4 ಕ್ಷಿಪಣಿ ಯಶಸ್ವಿಯಾಯಿತು. ಅಗ್ನಿ-4 ಕ್ಷಿಪಣಿ ಘನ ಇಂಧನ ಬಳಕೆ ಮಾಡುವ ಇಂಜಿನ್ ಹೊಂದಿದ್ದು, ಕ್ಷಿಪಣಿ ಉಡಾವಣೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ (ಕ್ಯಾನಿಸ್ಟರ್) ಮೂಲಕ ಅಗ್ನಿ-4 ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.
ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಈ ಖಂಡಾಂತರ ಅಗ್ನಿ-4 ಕ್ಷಿಪಣಿಯನ್ನು ನಾಲ್ಕನೇ ಬಾರಿಗೆ ಭಾರತೀಯ ಸೇನೆ ಪ್ರಯೋಗಕ್ಕೆ ಒಳಪಡಿಸಿದ್ದು, ಇದು ಈ ಕ್ಷಿಪಣಿಯ ಅಂತಿಯ ಪ್ರಯೋಗವಾಗಿದೆ, ಈ ಪ್ರಯೋಗಾರ್ಥ ಉಡಾವಣೆ ಕೂಡ ಯಶಸ್ಸು ಸಾಧಿಸಿರುವುದರಿಂದ ಇನ್ನು ಕೆಲವೇ ತಿಂಗಳಲ್ಲಿ ಈ ಕ್ಷಿಪಣಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ.
ಅಗ್ನಿ-4 ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, 20 ಮೀಟರ್ ಉದ್ದವಿದೆ. ಸುಮಾರು 4 ಸಾವಿರ ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಕಠಿಣ ಗುರಿಯನ್ನು ಕ್ಷಣಮಾತ್ರದಲ್ಲಿ ಛಿದ್ರ ಮಾಡಬಲ್ಲ ತಾಕತ್ತು ಈ ಕ್ಷಿಪಣಿಗಿದೆ.
ಕೇವಲ ಒಂದು ವಾರದ ಹಿಂದೆಯಷ್ಟೇ ಭಾರತ ತನ್ನ ಪ್ರಬಲ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಅಗ್ನಿ 5 ಕ್ಷಿಪಣಿ ಉಡಾವಣೆ ಸಂಬಂಧ ಕ್ಯಾತೆ ತೆಗೆದಿದ್ದ ಚೀನಾ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿತ್ತು. ಆದರೀಗ ಚೀನಾ ಕ್ಯಾತೆಗೆ ತನ್ನ ಕಾರ್ಯದಿಂದಲೇ ಭಾರತ ಉತ್ತರ ನೀಡಿದ್ದು, ಮತ್ತೊಂದು ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಚೀನಾ ದೇಶಕ್ಕೆ ತಿರುಗೇಟು ನೀಡಿದೆ.=