ಪ್ರಧಾನ ಸುದ್ದಿ

ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ: ತುಂಡುಡುಗೆ ಧರಿಸಿದ ಯುವತಿಯರದೇ ತಪ್ಪು ಎಂದ ಎಸ್ಪಿ ನಾಯಕ

Lingaraj Badiger
ನವದೆಹಲಿ: ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಮಹಿಳೆಯರ ತುಂಡುಡಿಗೆಯೇ ಕಾರಣ ಎಂದಿದ್ದಾರೆ.
ಹೊಸ ವರ್ಷದ ಮೋಜು ಮಸ್ತಿ ಸಂದರ್ಭದಲ್ಲಿ 'ಆಕರ್ಷಕವಾಗಿ' ತುಂಡುಡಿಗೆ ಧರಿಸಿ ಒಂಟಿಯಾಗಿ ಹೊರಗೆ ಬಂದಿದ್ದ ಮಹಿಳೆಯರೇ ಈಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಹೆಚ್ಚಾಗಿ ಅರೆ ನಗ್ನವಾಗಿಯೇ ಇರುತ್ತಾರೆ ಎಂದು ಅಜ್ಮಿ ಹೇಳಿದ್ದಾರೆ.
ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ವಿರೋಧಿಸಬೇಕು. ನನ್ನ ಕುಟುಂಬದ ಯಾವುದೇ ಮಹಿಳೆ ರಾತ್ರಿ 12 ಗಂಟೆಯ ನಂತರ ಒಬ್ಬಂಟಿಯಾಗಿ ಹೊರಗೆ ಹೋಗುತ್ತೇನೆ ಎಂದರೆ ನಾವು ಅದಕ್ಕೆ ಅವಕಾಶ ನೀಡಲ್ಲ ಎಂದು ಎಸ್ಪಿ ನಾಯಕ ತಿಳಿಸಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಪೊಲೀಸರು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಸ್ವತಃ ನಾವೇ ನಮ್ಮ ಭದ್ರತೆ ಬಗ್ಗೆ ಕಾಳಜಿ ವಹಿಸಬೇಕು. ಹಾಗಂತ ನಾನು ಮಹಿಳಾ ವಿರೋಧಿಯಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಜ್ಮಿ ಹೇಳಿದ್ದಾರೆ.
ನಿನ್ನೆಯಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಇಂತಹ ಘಟನೆಗೆ ಯುವಕರ ಪಾಶ್ಚಿಮಾತ್ಯ ಸಂಸ್ಕೃತಿಯೆ ಕಾರಣ ಎಂದು ಹೇಳಿದ್ದರು. ಇದಕ್ಕೆ ರಾಜ್ಯ ಮಹಿಳಾ ಆಯೋಗ ತೀವ್ರ ವಿರೋಧ ವ್ಯಕ್ತಪಡಿಸಿದೆ.
SCROLL FOR NEXT