ನವದೆಹಲಿ: ಪಾಕಿಸ್ತಾನ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಬಯಸುವುದಾದರೆ ಮೊದಲು ಭಯೋತ್ಪಾದನೆಯಿಂದ ಹೊರಬರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವಾಲಯ ದೆಹಲಿಯಲ್ಲಿ ಸಂಘಟಿಸಿದ ಎರಡನೇ ಫ್ಲ್ಯಾಗ್ಶಿಪ್ ರೈಸೀನಾ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಪೂರ್ಣ ದಕ್ಷಿಣ ಏಷ್ಯಾದಲ್ಲಿ ಶಾಂತಿಯುತ ಬಾಂಧವ್ಯಗಳು ಇರಬೇಕು ಎಂದು ನಾನು ಬಯಸುತ್ತೇನೆ. ಈ ದೃಷ್ಟಿಕೋನವೇ ನನಗೆ ಪಾಕಿಸ್ತಾನವೂ ಸೇರಿದಂತೆ ಎಲ್ಲ ಸಾರ್ಕ್ ರಾಷ್ಟ್ರಗಳನ್ನೂ ನನ್ನ ಪ್ರಮಾಣವಚನ ಸಮಾರಂಭಕ್ಕೆ ಕರೆಯುವಂತೆ ಪ್ರೇರೇಪಿಸಿತು. ಇದೇ ಕಾರಣಕ್ಕಾಗಿ ನಾನು ಲಾಹೋರ್ವರೆಗೂ ಪ್ರಯಾಣ ಬೆಳೆಸಿದೆ. ಆದರೆ ಭಾರತ ಮಾತ್ರವೇ ಶಾಂತಿಗಾಗಿ ನಡೆದರೆ ಸಾಲದು. ಪಾಕಿಸ್ತಾನವೂ ಶಾಂತಿಯ ಮಾರ್ಗದಲ್ಲಿ ಪಯಣಿಸಬೇಕು ಎಂದಿದ್ದಾರೆ.
ಇದೇ ವೇಳೆ ಭಾರತ ಮತ್ತು ಚೀನಾಕ್ಕೆ ಅಭೂತಪೂರ್ವ ಅವಕಾಶಗಳಿದ್ದು, ಎರಡು ದೊಡ್ಡ ರಾಷ್ಟ್ರಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇರುವುದು ಅಸಹಜವಲ್ಲ. ಉಭಯ ರಾಷ್ಟ್ರಗಳೂ ಪರಸ್ಪರರ ಕಾಳಜಿ ಮತ್ತು ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮವಾಗಿರಬೇಕು ಮತ್ತು ಗೌರವಿಸಬೇಕು ಎಂದು ಮೋದಿ ಚೀನಾಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಮ್ಮ ನಾಗರಿಕರ ರಕ್ಷಣೆ ಬಹಳ ಮುಖ್ಯವಾದದ್ದು. ಹಾಗಂತ ಸ್ವಹಿತಾಸಕ್ತಿ ಅನ್ನೋದಷ್ಟೇ ನಮ್ಮ ಸಂಸ್ಕೃತಿ ಹಾಗೂ ನಡವಳಿಕೆಯೂ ಅಲ್ಲ. ಹಲವು ಕಾರಣಗಳಿಗಾಗಿ, ಹಲವು ಮಜಲುಗಳಿಂದ ಜಗತ್ತು ಬದಲಾವಣೆಗಳ ಜತೆಗೆ ಬೆಳೆಯುತ್ತಿದೆ. ಇಡೀ ಜಗತ್ತಿಗೆ ಭಾರತದ ಬೆಳವಣಿಗೆ ಎಷ್ಟು ಮುಖ್ಯವೋ, ಭಾರತಕ್ಕೆ ಈ ಜಗತ್ತು ಅಷ್ಟೇ ಮುಖ್ಯ. ಜಗತ್ತಿನ ಇತರ ರಾಷ್ಟ್ರಗಳ ಜತೆಗೆ ಭಾರತಕ್ಕೆ ಬೇರ್ಪಡಿಸಲಾಗದ ನಂಟು ಏರ್ಪಡಬೇಕು ಎಂಬುದು ನಮ್ಮ ಆಸೆ ಎಂದು ಮೋದಿ ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ಅಮೆರಿಕ-ಭಾರತ ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡುವ ಬಗ್ಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ಮಾತನಾಡಿದ್ದೇನೆ. ಇನ್ನು ರಷ್ಯಾ ನಮ್ಮ ಮಿತ್ರ ರಾಷ್ಟ್ರ. ಅಧ್ಯಕ್ಷ ಪುಟಿನ್ ಹಾಗೂ ನನ್ನ ನಡುವೆ ಸುದೀರ್ಘ ಮಾತುಕತೆಗಳು ನಡೆದಿವೆ. ನಮ್ಮ ನೆರೆ ರಾಷ್ಟ್ರವಾಗಿ ಹಿಂಸಾಚಾರ, ದ್ವೇಷ ಪ್ರೋತ್ಸಾಹಿಸಿ, ಭಯೋತ್ಪಾದನೆ ರಫ್ತು ಮಾಡಿದವರು ಏಕಾಂಗಿಯಾಗಿ, ತಿರಸ್ಕೃತರಾಗಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಪಾಕ್ ಗೆ ತಿರುಗೇಟು ನೀಡಿದರು.